ವಾಷಿಂಗ್ಟನ್ : ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ವಿಚಾರವಾಗಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಯುದ್ಧದ ಭವಿಷ್ಯ ಮತ್ತು ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಕುರಿತು ನೆತನ್ಯಾಹು ಹೊಂದಿರುವ ಅತಿಯಾದ ಆತ್ಮವಿಶ್ವಾಸದ ಬಗ್ಗೆ ವ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ‘ಆಕ್ಸಿಯೋಸ್’ ವರದಿ ಮಾಡಿದೆ.
ಈ ವಾರದ ಆರಂಭದಲ್ಲಿ ನಡೆದ ದೂರವಾಣಿ ಮಾತುಕತೆ ವೇಳೆ, ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡುವುದು ಸುಲಭ ಎಂದು ನೆತನ್ಯಾಹು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ವ್ಯಾನ್ಸ್ ಪ್ರಶ್ನಿಸಿದ್ದಾರೆ. ಯುದ್ಧ ಆರಂಭವಾಗುವ ಮೊದಲು ನೆತನ್ಯಾಹು ಅವರು ಅಮೆರಿಕದ ಅಧ್ಯಕ್ಷರಿಗೆ “ಇದು ತುಂಬಾ ಸುಲಭದ ಕೆಲಸ” ಎಂಬಂತೆ ಬಿಂಬಿಸಿದ್ದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ವ್ಯಾನ್ಸ್, ಈ ಯುದ್ಧವು ಅಮೆರಿಕದ ಈ ಹಿಂದಿನ ‘ಅಂತ್ಯವಿಲ್ಲದ ವಿದೇಶಿ ಯುದ್ಧಗಳ’ (Forever Wars) ಮಾದರಿಯಾಗಬಾರದು ಎಂಬ ಸ್ಪಷ್ಟ ನಿಲುವು ತಳೆದಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ವಿರುದ್ಧ ಅಮೆರಿಕ ಗಂಭೀರ ಆರೋಪ
ಈ ಸಂಭಾಷಣೆಯ ಬೆನ್ನಲ್ಲೇ, ಇಸ್ರೇಲ್ ಸರ್ಕಾರವು ಉದ್ದೇಶಪೂರ್ವಕವಾಗಿ ಜೆ.ಡಿ. ವ್ಯಾನ್ಸ್ ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದು ಅಮೆರಿಕದ ಉನ್ನತ ಮೂಲಗಳು ಆರೋಪಿಸಿವೆ. ಇರಾನ್ ದೇಶವು ಶಾಂತಿ ಮಾತುಕತೆಗಾಗಿ ವ್ಯಾನ್ಸ್ ಅವರನ್ನೇ ಹೆಚ್ಚು ನಂಬುತ್ತಿದೆ ಎಂಬಂತಹ ಸುದ್ದಿಗಳು ಹಬ್ಬುತ್ತಿರುವುದು ಇಸ್ರೇಲ್‌ನ ತಂತ್ರಗಾರಿಕೆಯಾಗಿದೆ ಎಂದು ಹೇಳಲಾಗಿದೆ. “ಇದು ಜೆ.ಡಿ. ವ್ಯಾನ್ಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆ” ಎಂದು ಅಮೆರಿಕದ ಅಧಿಕಾರಿಯೊಬ್ಬರು ಕಿಡಿಕಾರಿದ್ದಾರೆ. ಯುದ್ಧವನ್ನು ಮಾತುಕತೆಯ ಮೂಲಕ ಅಂತ್ಯಗೊಳಿಸಲು ವ್ಯಾನ್ಸ್ ಸದ್ಯಕ್ಕಿರುವ ಅತ್ಯುತ್ತಮ ಆಯ್ಕೆಯಾಗಿದ್ದು, ಅದನ್ನು ಹಳಿ ತಪ್ಪಿಸಲು ಇಸ್ರೇಲ್ ಯತ್ನಿಸುತ್ತಿದೆ ಎಂಬುದು ಅಮೆರಿಕದ ಆತಂಕವಾಗಿದೆ.
ವ್ಯಾನ್ಸ್ ನಿಲುವಿಗೆ ಡೊನಾಲ್ಡ್ ಟ್ರಂಪ್ ಬೆಂಬಲ
ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ’ ವಿಚಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವ್ಯಾನ್ಸ್ ನಡುವೆ ಕೆಲವು ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ, ವ್ಯಾನ್ಸ್ ಅವರ ಮುನ್ನೆಚ್ಚರಿಕೆಯ ನಡೆಯನ್ನು ಟ್ರಂಪ್ ಗೌರವಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, “ವ್ಯಾನ್ಸ್ ನನ್ನಂತೆಯೇ ಯೋಚಿಸದಿರಬಹುದು, ಆದರೆ ಅವರ ಮೇಲೆ ನನಗೆ ನಂಬಿಕೆಯಿದೆ” ಎಂದು ಹೇಳಿದ್ದಾರೆ. ಯುದ್ಧದ ಆರಂಭದಿಂದಲೂ ಹೆಚ್ಚು ಸಕ್ರಿಯವಾಗಿರದಿದ್ದರೂ, ಶಾಂತಿ ಮಾತುಕತೆಗಳಲ್ಲಿ ವ್ಯಾನ್ಸ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಿಂದಿನ ತಪ್ಪುಗಳನ್ನು ಮತ್ತೆ ಮಾಡದಂತೆ ಅಮೆರಿಕವನ್ನು ರಕ್ಷಿಸುವುದು ತಮ್ಮ ಆದ್ಯತೆ ಎಂದು ವ್ಯಾನ್ಸ್ ಈ ಮೊದಲೇ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಅಭಿಮಾನಿಗಳ ಮೇಲೆ ತಾಳ್ಮೆ ಕಳೆದುಕೊಂಡ್ರಾ ರೋಹಿತ್ ಶರ್ಮಾ? ವಿಡಿಯೋ ನೋಡಿ!



















