ಟೆನ್ನಿಸ್ ಅಂಗಳದ ಅನಭಿಷಕ್ತ ದೊರೆಯಾಗಿ ಮೆರೆದಿದ್ದ ಸ್ಪೇನ್ ನ ರಾಫೆಲ್ ನಡಾಲ್ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ರಾಫೆಲ್ ಅವರು ತಮ್ಮ 38ನೇ ವಯಸ್ಸಿನಲ್ಲಿ ವಿದಾಯ ಹೇಳಿದ್ದಾರೆ. ತಮ್ಮ ಈ ನಿವೃತ್ತಿಯ ನಿರ್ಧಾರವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ವೃತ್ತಿ ಜೀವನದಲ್ಲಿ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್, ನವೆಂಬರ್ ನಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ ಪಂದ್ಯದ ನಂತರ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ.
ಡೇವಿಸ್ ಕಪ್ ಫೈನಲ್ ನಲ್ಲಿ ಸ್ಪೇನ್ ತಂಡವು ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ನವೆಂಬರ್ 19ರಿಂದ ನಡೆಯಲಿದೆ. ನಿವೃತ್ತಿ ಕುರಿತು ಮಾತನಾಡಿರುವ ನಡಾಲ್, ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ತುಂಬಾ ಕಷ್ಟವಾಗಿತ್ತು. ಕಳೆದ ಎರಡು ವರ್ಷಗಳು ಸವಾಲಿನಿಂದ ಕೂಡಿದ್ದವು. ಇದು ತುಂಬಾ ಕಠಿಣ ನಿರ್ಧಾರವಾಗಿದ್ದರೂ ಜೀವನದ ಪ್ರತಿಯೊಂದು ಆರಂಭಕ್ಕೂ ಅಂತ್ಯವಿದೆ. ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ ಎಂದಿದ್ದಾನೆ.
ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿರುವ ರಾಫೆಲ್ ನಡಾಲ್, ನೊವಾಕ್ ಜೊಕೊವಿಚ್ ನಂತರ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಜೊಕೊವಿಚ್ 24 ಗ್ರ್ಯಾಂಡ್ ಸ್ಲಾಮ್ ಗಳನ್ನು ಗೆದ್ದಿದ್ದಾರೆ. 4 ಬಾರಿ ಯುಎಸ್ ಓಪನ್ ಮತ್ತು ತಲಾ 2 ಬಾರಿ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ನಡಾಲ್ ಗೆದ್ದಿದ್ದಾರೆ. ಅಲ್ಲದೇ, 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.