ದೇವಸ್ಥಾನದ ಗೋಡೆ ಕುಸಿದ ಪರಿಣಾಮ 9 ಜನ ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಪಕ್ಕದಲ್ಲಿ ಶೆಡ್ ಹಾಕಿಕೊಂಡು ಮಕ್ಕಳು ಶಿವಲಿಂಗ ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದರೆ, ಈ ಸಂದರ್ಭದಲ್ಲಿ ಶಿಥಿಲಗೊಂಡಿದ್ದ ದೇವಸ್ಥಾನದ ಗೋಡೆ ಕುಸಿದು ಮಕ್ಕಳು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಎಲ್ಲ ಮಕ್ಕಳನ್ನೂ ಸುಮಾರು 10 ರಿಂದ 14 ವರ್ಷದೊಳಗಿನವರು ಎಂದು ಗುರುತಿಸಲಾಗಿದೆ. ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೇವಸ್ಥಾನದಲ್ಲಿ ನಡೆಯಲಿರುವ ಭಗವತ್ ಕಥಾಗಾಗಿ ಶಿವಲಿಂಗವನ್ನು ಮಕ್ಕಳು ಸಿದ್ಧಪಡಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಸರ್ಕಾರವು ಕ್ರಮಕ್ಕೆ ಮುಂದಾಗಿದೆ. ಅಪಘಾತದ ತನಿಖೆಗೆ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಆದೇಶ ನೀಡಿದ್ದಾರೆ. ಅಲ್ಲದೇ, ಮಕ್ಕಳ ಕುಟುಂಬಸ್ಥರಿಗೆ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಮೋಹನ್ ಯಾದವ್ ಭರವಸೆ ನೀಡಿದ್ದಾರೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಕಟ್ಟಡವೊಂದರ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೂಡ ಶನಿವಾರವಷ್ಟೇ ನಡೆದಿತ್ತು. ಈಗ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ.
ಮಧ್ಯಪ್ರದೇಶದಲ್ಲಿ ಶಾಲೆಗಳ ಸ್ಥಿತಿ ಕೂಡ ಹದಗೆಟ್ಟಿವೆ. ಸರಿಯಾಗಿ ಶಿಕ್ಷಕರಿಲ್ಲ. ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಹೀಗಾಗಿಯೇ ಅಲ್ಲಿನ ಮಕ್ಕಳು ಶಾಲೆಯಿಂದ ದೂರವೇ ಉಳಿಯುತ್ತಿದ್ದಾರೆ.