ಅಹಮದಾಬಾದ್: ಗುರುವಾರ ಅಹಮದಾಬಾದ್‌ನಲ್ಲಿ ಪತನಗೊಂಡ ಏರಿಂಡಿಯಾ ಡ್ರೀಮ್ ಲೈನರ್ ವಿಮಾನ ಅವಘಡಕ್ಕೆ ಸಂಬಂಧಿಸಿ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿವೆ. ವಿಮಾನವು ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆಯೇ ಅದು ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ತಾಪಮಾನ 1000 ಡಿಗ್ರಿ ಸೆಲ್ಶಿಯಸ್‌ಗೇರಿತ್ತು. ಇಂತಹ ಬಿಸಿಯಲ್ಲಿ ಕಾರ್ಯಾಚರಣೆ ನಡೆಸುವುದೇ ಅಸಾಧ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿರು ಬೇಸಗೆಯಲ್ಲಿ 45-50 ಡಿ.ಸೆ. ತಾಪಮಾನವನ್ನೇ ತಡೆಯಲು ನಮಗೆ ಕಷ್ಟವಾಗುತ್ತದೆ. ಇಂಥ ಶಾಖದಲ್ಲಿ ಮನೆಯಿಂದ ಹೊರಗೆ ಕಾಲಿಡೋದು ಹೇಗೆ ಎಂಬ ಚಿಂತೆ ಕಾಡುತ್ತದೆ. ಹೀಗಿರುವಾಗ ಏಕಾಏಕಿ ತಾಪಮಾನ 1000 ಡಿಗ್ರಿಗೇರಿದರೆ ಪರಿಸ್ಥಿತಿ ಹೇಗಿರಬಹುದು? ಇದನ್ನು ಊಹಿಸುವುದೂ ಅಸಾಧ್ಯ ಅಲ್ಲವೇ?
ಏರಿಂಡಿಯಾ ವಿಮಾನವು ಲಂಡನ್‌ಗೆ ಹೊರಟಿತ್ತು. ಇದು ಬಹಳ ದೀರ್ಘ ಪ್ರಯಾಣವಾಗಿದ್ದ ಕಾರಣ, ವಿಮಾನದ ಟ್ಯಾಂಕ್ ನಲ್ಲಿ ಬರೋಬ್ಬರಿ 1.25 ಲಕ್ಷ ಲೀಟರ್ ಇಂಧನವನ್ನು ತುಂಬಲಾಗಿತ್ತು. ಇಷ್ಟೊಂದು ಇಂಧನವು ಏಕಾಏಕಿ ಸ್ಫೋಟಗೊಂಡರೆ, ಅದರ ಪರಿಣಾಮ ಊಹಿಸುವುದಾದರೂ ಹೇಗೆ? ನಿನ್ನೆ ಅಹಮದಾಬಾದ್ ನಲ್ಲಿ ಆಗಿದ್ದೂ ಇದುವೇ. 1.25 ಲಕ್ಷ ಲೀಟರ್ ಇಂಧನವು ಒಮ್ಮಿಂದೊಮ್ಮೆಲೇ ಸ್ಫೋಟಗೊಂಡಿದೆ.
ಪರಿಣಾಮ ತಾಪಮಾನ 1000 ಡಿಗ್ರಿ ಸೆಲ್ಶಿಯಸ್‌ಗೆ ಏರಿದೆ. ಹೀಗಾಗಿ, ಆ ಪ್ರದೇಶದಲ್ಲಿದ್ದ ನಾಯಿ-ಬೆಕ್ಕುಗಳು, ಪಕ್ಷಿಗಳೂ ಸುಟ್ಟು ಕರಕಲಾಗಿವೆ. ಯಾರೂ ಈ ಬೆಂಕಿಯ ಜ್ವಾಲೆಯಿಂದ ಬದುಕುಳಿಯಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.
1.25 ಲಕ್ಷ ಲೀಟರ್ ವೈಮಾನಿಕ ಇಂಧನವು ವಿಮಾನದಲ್ಲಿತ್ತು. ಅದಕ್ಕೆ ಬೆಂಕಿ ಹತ್ತಿಕೊಂಡ ಕಾರಣ ಯಾರನ್ನೂ ರಕ್ಷಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಹೇಳಿದ್ದಾರೆ.ಘಟನಾ ಸ್ಥಳದಲ್ಲಿದ್ದ ರಾಜ್ಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಯೊಬ್ಬರು ಮಾತನಾಡಿ, ನಾನು 2017ರಿಂದಲೂ ಎಸ್‌ಡಿಆರ್‌ಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದೇನೆ. ಹಲವಾರು ದುರಂತಗಳಿಗೆ ಸಾಕ್ಷಿಯಾಗಿದ್ದೇನೆ. ಆದರೆ ಇಂಥದ್ದೊಂದು ಭೀಕರ ದುರಂತವನ್ನು ಎಂದೂ ನೋಡಿಲ್ಲ ಎಂದಿದ್ದಾರೆ.



















