ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಆರೋಗ್ಯದ ಬಗ್ಗೆ ಹೆಚ್ಚ ಕಾಳಜಿ ವಹಿಸಬೇಕೆಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ವಾಡಿಕೆಯಂತೆ ಮಾರ್ಚ್ ಅಥವಾ ಶಿವರಾತ್ರಿ ನಂತರದಿಂದ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿತ್ತು. ಆದರೆ, ಈಗ ಅದಕ್ಕೂ ಮೊದಲೇ ಫೆಬ್ರವರಿಯಲ್ಲಿ ತಾಪಮಾನ ಏರಿಕೆಯಾಗಿದ್ದು, ಜನ ಎಚ್ಚರಿಕೆಯಿಂದ ಇರಬೇಕಾಗಿದೆ.
ಎಲ್ಲಿ ತಾಪಮಾನ ಹೆಚ್ಚಳ?
ಉತ್ತರ ಒಳನಾಡಿನ ವಿಜಯಪುರ, ರಾಯಚೂರಿನಲ್ಲಿ ಬಿಸಿಲಿನ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತುಸು ತಾಪಮಾನ ಹೆಚ್ಚಳವಾಗಿದೆ. ಕಾರವಾರದಲ್ಲಿ ತಾಪಮಾನ ಹೆಚ್ಚಾಗಿದೆ. ಹೊನ್ನಾವರ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರಿನಲ್ಲಿ ಹೆಚ್ಚು ದಾಖಲಾಗಿದೆ. ಇನ್ನುಳಿದಂತೆ ಬೆಳಗಾವಿ ವಿಮಾನ ನಿಲ್ದಾಣ, ಬಾಗಲಕೋಟೆ ಮತ್ತು ಹಾವೇರಿ, ದಾವಣಗೆರೆ, ಬೆಂಗಳೂರು (ಕೆಐಎಎಲ್) ವಿಮಾನ ನಿಲ್ದಾಣ ಮತ್ತು ಹಾಸನ ಜಿಲ್ಲೆಗಳಲ್ಲಿ ಕೂಡ ಹೆಚ್ಚು ದಾಖಲಾಗಿದೆ.
ಗರಿಷ್ಠ ತಾಪಮಾನ ಎಲ್ಲಿ?
ರಾಜ್ಯದಲ್ಲಿ ಮುಂದಿನ 5 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗುವುದಿಲ್ಲ. ಉತ್ತರ ಒಳನಾಡಿನ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3°C, ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ 1-2°C ಮತ್ತು ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ.
ಕರಾವಳಿ ಜಿಲ್ಲೆಗಳಲ್ಲಿ 33-35 ° C ರಷ್ಟು ತಾಪಮಾನ ಇದ್ದರೆ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಕೊಪ್ಪಳ ಮತ್ತು ಹಾವೇರಿಯಲ್ಲಿ 34-35 ° C ಮತ್ತು ಉತ್ತರ ಆಂತರಿಕ ಕರ್ನಾಟಕದ ಗದಗ, ಕಲಬುರಗಿ, ಬಾಗಲಕೋಟೆ ಮತ್ತು ರಾಯಚೂರಿನಲ್ಲಿ 36-38 ° C ರಷ್ಟು ದಾಖಲಾಗಿದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 34-36°C ರಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.