ದಾವಣಗೆರೆ: ರಾಜ್ಯ ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಮಾಡಿದ ಸಂಧರ್ಭದಲ್ಲಿ ನಾನು ಬೆಂಗಳೂರಲ್ಲಿ ರಾಜಣ್ಣ ಅವರ ಕಚೇರಿಯಲ್ಲಿ ಇದ್ದಿದ್ದೆ. ಮಾಧ್ಯಮಗಳಲ್ಲಿ ಅವರ ರಾಜೀನಾಮೆ ಸುದ್ದಿ ಬರುತಿತ್ತು. ಆದರೆ ಅವರಿಗೆ ಈ ಬಗ್ಗೆ ಗೊತ್ತಿರಲಿಲ್ಲ. ಅವರ ಪಿಎ ಬಂದು ಹೇಳಿದ ಮೇಲೆ ರಾಜಣ್ಣಅವರಿಗೆ ಗೊತ್ತಾಗಿದ್ದು ಎಂದು ಜೆಡಿಎಸ್ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ನಾಡಗೌಡ, ರಾಹುಲ್ ಗಾಂಧಿ ಅವರು ಆರೋಪಿಸಿರುವ ಮತ ಕಳ್ಳತನದ ಬಗ್ಗೆ ರಾಜಣ್ಣ ಸತ್ಯವನ್ನೇ ಹೇಳಿದರು. ಓಟರ್ ಲಿಸ್ಟ್ ಫೈನಲ್ ಮಾಡುವ ಮುಂಚೆ ಅಧಿಕೃತ ರಾಜಕೀಯ ಪಕ್ಷಗಳಿಗೆ ಒಂದು ಪ್ರತಿ ಕೊಡುತ್ತಾರೆ. ಅದರಲ್ಲಿ ಏನಾದರೂ ತಪ್ಪು ಮಾಡಿದರೆ ಆಕ್ಷೇಪಿಸಬಹುದು ಎಂದು ಕೆ.ಎನ್.ರಾಜಣ್ಣ ಅವರು ವಾಸ್ತವಾಂಶವನ್ನು ಹೇಳಿದ್ದರು. ಇದೊಂದೆ ಕಾರಣಕ್ಕೆ ಇಂದು ಸಚಿವ ಸಂಪುಟದಿಂದ ವಜಾ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳುವುದು ಅಪರಾಧವಾಗಿದೆ ಎಂದಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರ ಹೆಸರು ಇರುತ್ತದೆ. ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬಂದಾಗ ಎರಡೂ ಕಡೆ ಹೆಸರು ಇರುತ್ತದೆ. ಬಹಳಷ್ಟು ಮಂದಿಗೆ ಎರಡು ಕಡೆ ಓಟ್ ಇರುವುದು ಅಪರಾಧ ಎಂದು ಗೊತ್ತಿರಲ್ಲ. ನಾವು ಸಹ ಮೃತ ವ್ಯಕ್ತಿಯ ಹೆಸರು ಪಟ್ಟಿಯಿಂದ ತೆಗೆದು ಹಾಕಿ ಎಂದು ಹೋಗಿ ಹೇಳುವುದಿಲ್ಲ, ಎರಡು ವರ್ಷ ಆದ ಮೇಲೆ ರಾಹುಲ್ ಗಾಂಧಿಗೆ ಈಗ ಎಚ್ಚರವಾಗಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ರಾಹುಲ್ ಗಾಂಧಿ ಅವರಿಗೆ ಅಧಿಕೃತ ದಾಖಲೆ ನೀಡಿ ಎಂದು ನೋಟಿಸ್ ಕೊಟ್ಟಿದೆ. ಡಿ.ಕೆ.ಶಿವಕುಮಾರ್ ದೂರು ಕೊಟ್ಟಿದ್ದಾರೆ. ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ದಿಕ್ಕು ತಪ್ಪಿಸಲು ಮತ ಕಳ್ಳತನ ಆರೋಪ ಮಾಡಿದ್ದಾರೆ. ಚುನಾವಣೆ ಆಯೋಗ ನೀಡಿರುವ ನೋಟಿಸ್‌ಗೆ ಏನು ಉತ್ತರ ಕೊಡುತ್ತಾರೆ ಎಂದು ಕಾದು ನೋಡಬೇಕು ಎಂದಿದ್ದಾರೆ.
ರಾಜಕೀಯ ಷಡ್ಯಂತ್ರ ಇದೆ ಎಂದು ರಾಜಣ್ಣ ಹೇಳಿದ್ದಾರೆ. ರಾಜಕೀಯ ಷಡ್ಯಂತ್ರ ಕಾಂಗ್ರೆಸ್ ಪಕ್ಷದಲ್ಲಿಯೇ ಇರಬೇಕಲ್ಲವಾ? ಇನ್ನು ಏನೇನೂ ಹೊರ ಬರುತ್ತದೆ ಎಂದು ಕಾದು ನೋಡೋಣ ರಾಜಣ್ಣ ನೇರಮಾತು ಆಡುವಂತವರು, ಇದ್ದಿದ್ದು ಇದ್ದಂಗೆ ಹೇಳುತ್ತಾರೆ ದೆಹಲಿಗೆ ಹೋಗಿ ಬಂದ ಮೇಲೆ ಏನೇನು ಹೊರಗೆ ಬರುತ್ತದೆಯೋ, ಜನರು ಕಾಯುತ್ತಿದ್ದಾರೆ. ನಾವು ಕಾಯುತ್ತಿದ್ದೇವೆ.
ಹೆಚ್.ಡಿ.ಕುಮಾರಸ್ವಾಮಿ ಅವರು ಓಟರ್ ಐಡಿಗೆ ಆಧಾರ್ ಲಿಂಕ್ ಮಾಡಿ ಎಂದು ಪರಿಹಾರ ಹೇಳಿದ್ದರು. ಇದೊಂದೇ ಅದಕ್ಕೆ ಪರಿಹಾರ, ಸುಪ್ರೀಂಕೋರ್ಟ್ ಆಧಾರ್ ಸೂಕ್ತ ದಾಖಲೆ ಅಲ್ಲ ಎಂದಿದ್ದಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ.