ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಿರುತೆರೆ ನಟ ಶ್ರೀಧರ್ ನಾಯಕ್ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ್, ಆರ್ಥಿಕವಾಗಿ ಸಂಕಷ್ಟದಲ್ಲಿದ್ರು. ಹೀಗಾಗಿಯೇ ಹಲವು ಸೆಲೆಬ್ರಿಟಿಗಳು ಕೂಡಾ ಶ್ರೀಧರ್ ಅವರಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಂತಿಮವಾಗಿ ನಿನ್ನೆ ರಾತ್ರಿ ಪ್ರಾಣಬಿಟ್ಟಿದ್ದಾರೆ. ಇನ್ನು ಆಪ್ತ ಮಿತ್ರನ ಅಗಲಿಕೆಯನ್ನು ನಟ ನಾಗೇಂದ್ರ ಶಾನ್ ತಮ್ಮಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ಶ್ರೀಧರ್ ನಾಯಕ್ ಪಾರು ಸೇರಿದಂತೆ ವಧು, ಮಂಗಳಗೌರಿ, ಮನೇಯೇ ಮಂತ್ರಾಲಯ ಸೇರಿದಂತೆ 40ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ರು. ಇತ್ತೀಚೆಗೆ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ಶ್ರೀಧರ್ ಅಭಿನಯಿಸಿದ್ರು. ರಾಜಮಾರ್ತಾಂಡ, ಈಶ ಮಹೇಶ ಸೇರಿದಂತೆ ತಮಿಳು ಸಿನಿಮಾಗಳಲ್ಲೂ ಶ್ರೀಧರ್ ಬಣ್ಣ ಹಚ್ಚಿದ್ರು. ಶ್ರೀಧರ್ ಅಗಲಿಕೆಗೆ ಧಾರಾವಾಹಿ ಮತ್ತು ಸಿನಿಮಾ ರಂಗದ ಹಲವರು ಕಂಬನಿ ಮಿಡಿದ್ದಾರೆ.



















