ಬೆಂಗಳೂರು : ಮೊಬೈಲ್ ಹೊಂದಿರುವ ಗ್ರಾಹಕರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು (ಟ್ರಾಯ್- TRAI) ಸಿಹಿ ಸುದ್ದಿ ನೀಡಿದೆ. ಇನ್ನುಮುಂದೆ ಮೊಬೈಲ್ ರಿಚಾರ್ಜ್ ಮಾಡುವಾಗ ಇಂಟರ್ನೆಟ್ ಪ್ಯಾಕ್ ಗಳಿಗೂ ರಿಚಾರ್ಜ್ ಮಾಡುವ ಅನಿವಾರ್ಯತೆಯನ್ನು ರದ್ದುಗೊಳಿಸಲು ಟ್ರಾಯ್ ಮುಂದಾಗಿದೆ. ಇದಕ್ಕಾಗಿ ಹೊಸ ನಿಯಮಗಳ ಕರಡು ರೂಪಿಸಿದ್ದು, ಹಲವು ಬದಲಾವಣೆ ಮಾಡಲು ತೀರ್ಮಾನಿಸಿದೆ. ಹೊಸ ನಿಯಮಗಳು ಜಾರಿಯಾದರೆ ಇಂಟರ್ನೆಟ್ ಬೇಡವಾದ ಗ್ರಾಹಕರಿಗೆ ಹಣ ಉಳಿಯಲಿದೆ.
2012ರ ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಮಗಳಿಗೆ ತಿದ್ದುಪಡಿ ತರಲು ಟ್ರಾಯ್ ಮುಂದಾಗಿದೆ. ಮೊಬೈಲ್ ಗ್ರಾಹಕರು ರಿಚಾರ್ಜ್ ಮಾಡುವಾಗ ವಾಯ್ಸ್ ಕರೆಗಳು ಹಾಗೂ ಎಸ್ಎಂಎಸ್ ಒಳಗೊಂಡಿರುವುದಕ್ಕೆ ಮಾತ್ರ ರಿಚಾರ್ಜ್ ಪ್ಲಾನ್ ರೂಪಿಸಬೇಕು. ಇಂಟರ್ನೆಟ್ ಬೇಡವಾದವರು, ಕೀಪ್ಯಾಡ್ ಮೊಬೈಲ್ ಬಳಸುತ್ತಿರುವವರಿಗೆ ಇಂಟರ್ನೆಟ್ ರಿಚಾರ್ಜ್ ಶುಲ್ಕವನ್ನು ಹೇರಬಾರದು ಎಂದು ಟ್ರಾಯ್ ಕರಡು ರೂಪಿಸಿದೆ.
ದೇಶದಲ್ಲಿ ಈಗಲೂ ಕೋಟ್ಯಂತರ ಜನ ಇಂಟರ್ನೆಟ್ ಬಳಸಲುವುದಿಲ್ಲ. ಕೇವಲ ಕರೆ ಹಾಗೂ ಎಸ್ಎಂಎಸ್ ಗಳಿಗಾಗಿ ಮೊಬೈಲ್ ಬಳಸುತ್ತಾರೆ. 2 ಜಿ ಮಾತ್ರ ಬಳಸುವವರೂ ಇದ್ದಾರೆ. ಇವರು ಸುಖಾಸುಮ್ಮನೆ ಇಂಟರ್ನೆಟ್ ರಿಚಾರ್ಜ್ ಮಾಡಿಸುವ ಪ್ಲಾನ್ ಗಳನ್ನು ಟೆಲಿಕಾಂ ಕಂಪನಿಗಳು ಹೊಂದಿವೆ. ಇದನ್ನು ರದ್ದುಗೊಳಿಸಲು ಟ್ರಾಯ್ ಈಗ ಮುಂದಾಗಿರುವುದು ಸ್ವಾಗತಾರ್ಹ ಎಂದೇ ಹೇಳಲಾಗುತ್ತಿದೆ.
30 ದಿನಕ್ಕೆ ರಿಚಾರ್ಜ್ ಪ್ಲಾನ್
ಹಿಂದೆ ಹೆಚ್ಚಿನ ಪ್ಲಾನ್ ಗಳು 28 ದಿನಗಳಿಗೆ ಇರುತ್ತಿದ್ದವು. ಆದರೆ ಈಗ ಟ್ರಾಯ್ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದು, ಪ್ರತಿ ಕಂಪನಿಯೂ ಕನಿಷ್ಠ ಒಂದು ಪೂರ್ತಿ 30 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಮತ್ತು ತಿಂಗಳ ಅದೇ ದಿನಾಂಕಕ್ಕೆ ರಿಚಾರ್ಜ್ ಆಗುವ (Renew on same date) ಪ್ಲಾನ್ ಅನ್ನು ಹೊಂದಿರಲೇಬೇಕು ಎಂದು ಕೂಡ ಟ್ರಾಯ್ ತಿಳಿಸಿದೆ.
ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ – ಯಾವ ಜಿಲ್ಲೆ ಫಸ್ಟ್, ಯಾವುದು ಲಾಸ್ಟ್? ಇಲ್ಲಿದೆ ಲಿಸ್ಟ್!


















