ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಂತೆಯೇ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ, ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ಮಹತ್ವದ ಚುನಾವಣಾ ಆಶ್ವಾಸನೆಯನ್ನು ಘೋಷಿಸಿದ್ದಾರೆ. ತಮ್ಮ ಮಹಾಘಟಬಂಧನ್ ಸರ್ಕಾರ ಅಧಿಕಾರಕ್ಕೆ ಬಂದರೆ, ರಾಜ್ಯದ ಮಹಿಳೆಯರಿಗೆ ವಾರ್ಷಿಕ 30,000 ರೂ.ಗಳ ಆರ್ಥಿಕ ನೆರವನ್ನು ಒಂದೇ ಕಂತಿನಲ್ಲಿ ನೀಡುವುದಾಗಿ ಘೋಷಿಸಿದ್ದಾರೆ.
ಆಡಳಿತಾರೂಢ ಎನ್‌ಡಿಎ ಸರ್ಕಾರದ ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ಗೆ ಪ್ರತಿಯಾಗಿ ತೇಜಸ್ವಿ ಈ ಘೋಷಣೆ ಮಾಡಿದ್ದಾರೆ. ಎನ್‌ಡಿಎ ಯೋಜನೆಯಡಿ ಈಗಾಗಲೇ 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ತಲಾ 10,000 ರೂ.ಗಳನ್ನು ನೀಡಲಾಗಿದೆ. ಇದನ್ನು ಮೀರಿಸುವ ಭರವಸೆಯನ್ನು ಇದೀಗ ತೇಜಸ್ವಿ ನೀಡಿದ್ದು, ಈ ಮೂಲಕ ಮಹಿಳೆಯರ ಮತಗಳು ಎನ್‌ಡಿಎ ಕಡೆಗೆ ವಾಲದಂತೆ ತಂತ್ರ ರೂಪಿಸಿದ್ದಾರೆ.
ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “‘ಮಾಯಿ ಬಹಿನ್ ಮಾನ್ ಯೋಜನೆ’ (ತಾಯಿ-ಸಹೋದರಿ ಗೌರವ ಯೋಜನೆ) ಅಡಿಯಲ್ಲಿ ಮುಂದಿನ ವರ್ಷ ಜನವರಿ 14ರ ಮಕರ ಸಂಕ್ರಾಂತಿಯ ದಿನದಂದು ಈ ಸಂಪೂರ್ಣ 30,000 ರೂ. ಮೊತ್ತವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು,” ಎಂದು ತಿಳಿಸಿದರು. ಈ ಹಿಂದೆ ಮಹಾಘಟಬಂಧನ್ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವುದಾಗಿ ಹೇಳಿತ್ತು. ಆದರೆ, ಬಿಹಾರದ ತಾಯಂದಿರು ಮತ್ತು ಸಹೋದರಿಯರ ಬೇಡಿಕೆಯ ಮೇರೆಗೆ ವಾರ್ಷಿಕ ಮೊತ್ತವನ್ನು ಒಂದೇ ಬಾರಿಗೆ ನೀಡುವುದಾಗಿ ತೇಜಸ್ವಿ ಸ್ಪಷ್ಟಪಡಿಸಿದ್ದಾರೆ.
ಇತರೆ ಪ್ರಮುಖ ಭರವಸೆಗಳು
ರೈತರಿಗೆ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 300ರೂ. ಮತ್ತು ಗೋಧಿಗೆ 400ರೂ. ಕನಿಷ್ಠ ಬೆಂಬಲ ಬೆಲೆ (MSP) ಮೇಲೆ ಬೋನಸ್. ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಇತರ ಸರ್ಕಾರಿ ನೌಕರರನ್ನು ಅವರ ತವರು ಜಿಲ್ಲೆಯಿಂದ 70 ಕಿಲೋಮೀಟರ್ ವ್ಯಾಪ್ತಿಯೊಳಗೆ ವರ್ಗಾವಣೆ. ಜೊತೆಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವುದಾಗಿಯೂ ತೇಜಸ್ವಿ ಪುನರುಚ್ಚರಿಸಿದ್ದಾರೆ.
ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಮೂಲಭೂತವಾದಿಗಳಿಗೆ ಮಣಿದ ಬಾಂಗ್ಲಾ ಯೂನುಸ್ ಸರ್ಕಾರ: ಸಂಗೀತ, ದೈಹಿಕ ಶಿಕ್ಷಕರ ನೇಮಕಾತಿ ರದ್ದು



















