ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ತಮ್ಮ ಕುಟುಂಬವನ್ನು ತೊರೆಯುವುದಾಗಿ ಘೋಷಿಸಿದ ಬೆನ್ನಲ್ಲೇ, ತಮ್ಮ ಸಹೋದರ ತೇಜಸ್ವಿ ಯಾದವ್ ಮತ್ತು ಅವರ ಆಪ್ತ ಸಹಚರರಿಂದ ತಮಗೆ ಅನ್ಯಾಯ, ಅವಮಾನ ಮತ್ತು ದ್ರೋಹವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮನ್ನು ಕುಟುಂಬದಿಂದ ದೂರ ಮಾಡಿದ್ದಲ್ಲದೆ, ಅಸಭ್ಯವಾಗಿ ನಿಂದಿಸಿ, ಹೊಡೆಯಲು ಚಪ್ಪಲಿ ಎತ್ತಿದ್ದರು ಎಂದು ಅವರು ಭಾನುವಾರ ನೋವಿನಿಂದ ಹೇಳಿಕೊಂಡಿದ್ದಾರೆ.
ನನ್ನನ್ನು ಅನಾಥಳನ್ನಾಗಿಸಿದರು
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯವಾಗಿ ಸೋತ ಒಂದು ದಿನದ ನಂತರ, ರೋಹಿಣಿ ಆಚಾರ್ಯ ಅವರು ತಮ್ಮ ಈ ಸ್ಥಿತಿಗೆ ಸಹೋದರ ತೇಜಸ್ವಿ ಯಾದವ್ ಅವರ ಆಪ್ತರಾದ ಸಂಜಯ್ ಯಾದವ್ ಮತ್ತು ರಮೀಜ್ ಕಾರಣ ಎಂದು ನೇರವಾಗಿ ದೂಷಿಸಿದ್ದರು. ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಅವರು, “ನಿನ್ನೆ, ಒಬ್ಬ ಮಗಳನ್ನು, ಸಹೋದರಿಯನ್ನು, ವಿವಾಹಿತ ಮಹಿಳೆಯನ್ನು, ತಾಯಿಯನ್ನು ಅವಮಾನಿಸಲಾಯಿತು, ಅವಳ ಮೇಲೆ ಅಸಭ್ಯ ನಿಂದನೆಗಳನ್ನು ಮಾಡಲಾಯಿತು, ಹೊಡೆಯಲು ಚಪ್ಪಲಿಯನ್ನು ಎತ್ತಲಾಯಿತು. ನಾನು ನನ್ನ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ, ಸತ್ಯವನ್ನು ಬಿಟ್ಟುಕೊಡಲಿಲ್ಲ, ಇದೇ ಕಾರಣಕ್ಕೆ ಈ ಅವಮಾನವನ್ನು ಸಹಿಸಬೇಕಾಯಿತು” ಎಂದು ಬರೆದಿದ್ದಾರೆ. “ನಿನ್ನೆ ಒಬ್ಬ ಮಗಳು ಅನಿವಾರ್ಯವಾಗಿ ಅಳುತ್ತಿದ್ದ ತನ್ನ ತಂದೆ-ತಾಯಿ ಮತ್ತು ಸಹೋದರಿಯರನ್ನು ಬಿಟ್ಟು ಬಂದಳು; ಅವರು ನನ್ನನ್ನು ನನ್ನ ತವರಿನಿಂದ ಬೇರೆಯಾಗಿಸಿದರು… ಅವರು ನನ್ನನ್ನು ಅನಾಥಳನ್ನಾಗಿಸಿದರು” ಎಂದು ರೋಹಿಣಿ ನೋವು ತೋಡಿಕೊಂಡಿದ್ದಾರೆ.
ನನ್ನನ್ನು ಹೊರಹಾಕಿದ್ದು ಸಂಜಯ್ ಯಾದವ್, ರಮೀಜ್
ಶನಿವಾರ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದ ರೋಹಿಣಿ, “ನಾನು ರಾಜಕೀಯ ಮತ್ತು ನನ್ನ ಕುಟುಂಬವನ್ನು ತೊರೆಯುತ್ತಿದ್ದೇನೆ. ಸಂಜಯ್ ಯಾದವ್ ಮತ್ತು ರಮೀಜ್ ನನ್ನನ್ನು ನನ್ನ ಮನೆಯಿಂದ ಹೊರಹಾಕಿದರು” ಎಂದು ಹೇಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನಗೆ ಈಗ ಕುಟುಂಬವಿಲ್ಲ. ಈ ಬಗ್ಗೆ ಏನೇ ಕೇಳುವುದಿದ್ದರೂ ನೀವು ತೇಜಸ್ವಿ ಯಾದವ್, ಸಂಜಯ್ ಯಾದವ್ ಮತ್ತು ರಮೀಜ್ ಅವರನ್ನೇ ಕೇಳಬೇಕು. ಅವರೇ ನನ್ನನ್ನು ಕುಟುಂಬದಿಂದ ಹೊರಹಾಕಿದ್ದು. ಪಕ್ಷ ಏಕೆ ಇಷ್ಟು ಹೀನಾಯವಾಗಿ ಸೋತಿತು ಎಂದು ಇಡೀ ದೇಶ ಕೇಳುತ್ತಿದೆ. ಆದರೆ ಸಂಜಯ್ ಯಾದವ್ ಮತ್ತು ರಮೀಜ್ ಹೆಸರು ಹೇಳಿದರೆ, ನಿಮ್ಮನ್ನು ಅವಮಾನಿಸಲಾಗುತ್ತದೆ, ನಿಂದಿಸಿ ಹೊರಹಾಕಲಾಗುತ್ತದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯಾರು ಈ ಸಂಜಯ್ ಮತ್ತು ರಮೀಜ್?
ಸಂಜಯ್ ಯಾದವ್ ಆರ್‌ಜೆಡಿಯ ಸಂಸದರಾಗಿದ್ದರೆ, ರಮೀಜ್ ಉತ್ತರ ಪ್ರದೇಶದ ರಾಜಕೀಯ ಕುಟುಂಬದಿಂದ ಬಂದವರಾಗಿದ್ದು, ತೇಜಸ್ವಿ ಯಾದವ್ ಅವರ ಆಪ್ತರಾಗಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ರೋಹಿಣಿ ಆಚಾರ್ಯ ಅವರು ಸಿಂಗಾಪುರ ಮೂಲದ ಪತಿಯೊಂದಿಗೆ ನೆಲೆಸಿದ್ದಾರೆ. ಕಳೆದ ವರ್ಷ ಬಿಹಾರದ ಸರಣ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.
ಇದನ್ನೂ ಓದಿ: ಲಾಲು ಕುಟುಂಬ ಕಲಹದಲ್ಲಿ ದಿಢೀರ್ ಪ್ರತ್ಯಕ್ಷವಾದ ರಮೀಜ್ ಖಾನ್ ಯಾರು?




















ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಮಾಡಿದವರಲ್ಲಿ ಸುದೀಪ್ ಫ್ಯಾನ್ಸ್?