ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕು, ಒಳ್ಳೆಯ ಸಂಬಳ ಪಡೆಯಬೇಕು ಎನ್ನುವವರಿಗೆ ಸುವರ್ಣಾವಕಾಶ ಲಭಿಸಿದೆ. ಅಂಚೆ ಇಲಾಖೆಯು ತಾಂತ್ರಿಕ ಮೇಲ್ವಿಚಾರಕರೊಬ್ಬರ ನೇಮಕಾತಿಗಾಗಿ ಅಧಿಸೂಚನೆ (India Post Recruitment 2025) ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಏಪ್ರಿಲ್ 15ರ ಗಡುವು ನೀಡಿದೆ. ಹಾಗಾಗಿ, ಉದ್ಯೋಗದ ಆಕಾಂಕ್ಷಿಗಳು ಏಪ್ರಿಲ್ 15ರೊಳಗೆ ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಅಂಚೆ ಇಲಾಖೆಯ ವೆಬ್ ಪೋರ್ಟಲ್ ಆಗಿರುವ indiapost.gov.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 22 ವರ್ಷದಿಂದ ಗರಿಷ್ಠ 30 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. ಸ್ತರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಏಳನೇ ವೇತನ ಆಯೋಗದ 6ನೇ ಹಂತದ ಅನ್ವಯ ಸಂಬಳ ನೀಡಲಾಗುತ್ತದೆ.
ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ತರಬೇತಿಯ ದಿನಾಂಕ ಮತ್ತು ಸ್ಥಳದ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುತ್ತದೆ. ಆಫ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ ಮೂಲಕ ಕಳುಹಿಸಬಹುದು. ವಿಳಾಸ ಇಂತಿದೆ- ಹಿರಿಯ ವ್ಯವಸ್ಥಾಪಕರು, ಮೇಲ್ ಮೋಟಾರ್ ಸೇವೆ, ಕೋಲ್ಕತ್ತಾ, 139, ಬೆಲೆಘಾಟ್ ರಸ್ತೆ, ಕೋಲ್ಕತ್ತಾ-700015.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್ ಅಥವಾ ಆಟೋಮೊಬೈಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು
- ಯಾವುದಾದರೂ ಆಟೋಮೊಬೈಲ್ ಕಂಪನಿಯಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಇರಬೇಕು
- ಎಸ್ಸೆಸ್ಸೆಲ್ಸಿ ಪಾಸಾದವರು ಇದ್ದರೆ 5 ವರ್ಷ ಉತ್ಪಾದನೆ, ರಿಪೇರಿ ಮಾಡುವ ಕಂಪನಿಯಲ್ಲಿ 5 ವರ್ಷ ಕೆಲಸ ಮಾಡಿರಬೇಕು
- ಒಂದು ವರ್ಷ ಸರ್ವಿಸ್ ಎಂಜಿನಿಯರ್ ಆಗಿ ಕೆಲಸ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು