ಬೆಂಗಳೂರು : ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಸೇವೆಯಲ್ಲಿ ವ್ಯತ್ಯಯಗೊಂಡಿದೆ. ತಾಂತ್ರಿಕ ದೋಷ ಸರಿಪಡಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಯಾಣಿಕರಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳ ಮನವಿ : “ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಆರ್. ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಮಾರ್ಗದ ನಾಲ್ಕು ರೈಲುಗಳ ಪೈಕಿ ಒಂದು ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10:15ರಿಂದ 25 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತಿವೆ. ಸಾಮಾನ್ಯ ದಿನಗಳಲ್ಲಿ ಹಳದಿ ಮಾರ್ಗದಲ್ಲಿ ನಾಲ್ಕು ರೈಲುಗಳು ಪ್ರತಿ 19 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತವೆ. ಆದರೆ ತಾಂತ್ರಿಕ ದೋಷದ ಕಾರಣದಿಂದ ಪ್ರಸ್ತುತ ಮೂರು ರೈಲುಗಳು ಪ್ರತಿ 25 ನಿಮಿಷಕ್ಕೊಮ್ಮೆ ಸಂಚರಿಸುತ್ತಿವೆ. ತಾಂತ್ರಿಕ ದೋಷ ಸರಿಪಡಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಪ್ರಯಾಣಿಕರು ಸಹಕರಿಸಬೇಕೆಂದು” ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ವಿ ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ನಡುವಿನ 19.15 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದ ಮೆಟ್ರೋ ಸೇವೆಗೆ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಆ ಮೂಲಕ ಈ ಮಾರ್ಗದಲ್ಲಿನ ಸಂಚಾರ ದಟ್ಟಣೆಯ ದೀರ್ಘಕಾಲದ ಸಮಸ್ಯೆಗೆ ಪರಿಹಾರ ದೊರೆತಿತ್ತು.