ಹೈದರಾಬಾದ್ : ಸಾಫ್ಟ್‌ವೇರ್ ಇಂಜಿನಿಯರ್ ಮಹಿಳೆಯೊಬ್ಬರನ್ನು ಆಕೆಯ ಮಾಜಿ ಪತಿ ಅತ್ಯಂತ ಕ್ರೂರವಾಗಿ ಹತ್ಯೆಗೈದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತನ್ನ ಮೇಲೆ ದಾಖಲಾಗಿದ್ದ ಕೌಟುಂಬಿಕ ದೌರ್ಜನ್ಯದ ಕೇಸಿನಿಂದಾಗಿ ತನಗೆ ಕೆನಡಾಗೆ ಮರಳಲು ಸಾಧ್ಯವಾಗುತ್ತಿಲ್ಲ ಎಂಬ ಹತಾಶೆ ಹಾಗೂ ತನ್ನ ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂಬ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ಕಳೆದ ಎರಡು ತಿಂಗಳಿನಿಂದಲೇ ಈ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಮಾಜಿ ಪತ್ನಿಯ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಆಕೆಯ ವಿಳಾಸವನ್ನು ಪತ್ತೆಹಚ್ಚಿದ್ದ ಈತ, ಹೈದರಾಬಾದ್‌ನ ಹಾಸ್ಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ. ಬುಧವಾರ ಎರಡು ಚಾಕುಗಳು, ಡ್ರಿಲ್ಲಿಂಗ್ ಮಷೀನ್ ಹಾಗೂ 5 ಲೀಟರ್ ಪೆಟ್ರೋಲ್ ತುಂಬಿದ್ದ ಬ್ಯಾಗ್‌ನೊಂದಿಗೆ ಆಕೆಯ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಾನೆ.
ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಮಾಜಿ ಪತ್ನಿ ಇದ್ದ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಿ, ಆಕೆಯ ತಲೆಗೆ ಚಾಕುವಿನಿಂದ ಹಲವು ಬಾರಿ ಇರಿದು ಸ್ಥಳದಲ್ಲೇ ಪ್ರಾಣಪಕ್ಷಿ ಹಾರುವಂತೆ ಮಾಡಿದ್ದಾನೆ. ಈ ವೇಳೆ ಆಕೆಯ ಅತ್ತೆ ಬಾಲ್ಕನಿಯಲ್ಲಿ ಇದ್ದರು ಎಂದು ಹೇಳಲಾಗಿದೆ.
ಕಾರಣವೇನು?
ಮೂಲತಃ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯವನಾದ ಆರೋಪಿ, 2022ರಲ್ಲಿ ಈ ಮಹಿಳೆಯನ್ನು ವಿವಾಹವಾಗಿದ್ದ. ಮದುವೆಯ ನಂತರ ಇಬ್ಬರೂ ಕೆನಡಾದಲ್ಲಿ ನೆಲೆಸಿದ್ದರು. ಆದರೆ ದಂಪತಿಯ ನಡುವೆ ಭಿನ್ನಾಭಿಪ್ರಾಯ ಮೂಡಿ ಮಹಿಳೆಯು ಭಾರತಕ್ಕೆ ಮರಳಿ ಆತನ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸು ದಾಖಲಿಸಿದ್ದರು. 2024ರಲ್ಲಿ ಇಬ್ಬರಿಗೂ ವಿಚ್ಛೇದನವಾಗಿತ್ತು. 2025ರಲ್ಲಿ ತನ್ನ ತಾಯಿಯ ಸಾವಿನ ಹಿನ್ನೆಲೆ ಭಾರತಕ್ಕೆ ಬಂದಿದ್ದ ಆರೋಪಿಯ ಪಾಸ್‌ಪೋರ್ಟ್ ಅನ್ನು ಈ ಕೇಸಿನ ಕಾರಣದಿಂದಾಗಿ ಅಮಾನತುಗೊಳಿಸಲಾಗಿತ್ತು.
ಇದರಿಂದಾಗಿ ಆತ ಕೆನಡಾದಲ್ಲಿನ ತನ್ನ ಕೆಲಸಕ್ಕೆ ಮರಳಲು ಸಾಧ್ಯವಾಗದೆ ನಿರುದ್ಯೋಗಿಯಾಗಿದ್ದ. ತನ್ನ ವೃತ್ತಿಜೀವನ ಹಾಳಾಗಲು ಮತ್ತು ತನ್ನ ತಾಯಿಯ ಮಾನಸಿಕ ವ್ಯಥೆಗೆ ಮಾಜಿ ಪತ್ನಿಯೇ ಕಾರಣ ಎಂಬ ಸಿಟ್ಟು ಅವನನ್ನು ಕಾಡುತ್ತಿತ್ತು. ಇದೇ ಕಾರಣಕ್ಕೆ ಆತ ಸಂಚು ರೂಪಿಸಿ ಈ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಆರೋಪಿ ಮತ್ತೊಂದು ಆಘಾತ ನೀಡಿದ್ದಾನೆ. ಕೊಲೆ ಮಾಡಿದ ನಂತರ ಕೋಣೆಯಲ್ಲೆಲ್ಲಾ ಪೆಟ್ರೋಲ್ ಸುರಿದು ತಾನು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ. ಪೊಲೀಸರು ಸಾಕಷ್ಟು ಮನವೊಲಿಸಿದ ನಂತರ ಆತ ಹೊರಬಂದಿದ್ದು, ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ. ಮೃತ ಮಹಿಳೆ ಏಪ್ರಿಲ್ 2025ರಲ್ಲಿ ಎರಡನೇ ಮದುವೆಯಾಗಿದ್ದು, ಆಕೆ 3 ತಿಂಗಳ ಗರ್ಭಿಣಿಯಾಗಿದ್ದರು ಎಂದು ಆಕೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : KSRTC ನೌಕರರ ಪ್ರತಿಭಟನೆಗೆ ಸಹಮತವಿದೆ | ಸಚಿವ ಸಂತೋಷ್ ಲಾಡ್



















