ಅಹಮದಾಬಾದ್ : ಭಾರತದ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ, ಗುಜರಾತ್ ಸರ್ಕಾರದ ಸಚಿವೆ ರಿವಾಬಾ ಜಡೇಜಾ ಶಾಕಿಂಗ್ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ವಿದೇಶಿ ಪ್ರವಾಸಗಳ ಸಮಯದಲ್ಲಿ ಕೆಲವು ಭಾರತೀಯ ಕ್ರಿಕೆಟಿಗರು ವಿವಿಧ ದುಶ್ಚಟಗಳಲ್ಲಿ ತೊಡಗುತ್ತಾರೆ ಎಂದು ಆರೋಪಿಸಿ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಆದರೆ, ನನ್ನ ಪತಿ ಎಂದಿಗೂ ಅಂತಹ ಯಾವುದೇ ದುಶ್ಚಟಗಳಲ್ಲಿ ಇದುವರೆಗೂ ತೊಡಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ ಜಡೇಜಾ, ಕ್ರಿಕೆಟಿಗರ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲದ ಅಭ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಅವರ ಸುತ್ತಮುತ್ತಲಿನ ಪರಿಸರ ಆ ರೀತಿಯಾಗಿದ್ದರೂ ತನ್ನ ಪತಿಗೆ ಅಂತಹ ಯಾವುದೇ ಅಭ್ಯಾಸಗಳಿಲ್ಲ ಎಂದು ಅವರು ರವೀಂದ್ರಾ ಜಡೇಜಾ ಅವರಿಗೆ ಈ ವಿಷಯದಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ.
“ನನ್ನ ಪತಿ, ಕ್ರಿಕೆಟಿಗ ರವೀಂದ್ರ ಜಡೇಜಾ ಕ್ರಿಕೆಟ್ ಆಡಲು ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾದಂತಹ ಹಲವು ದೇಶಗಳಿಗೆ ಪ್ರಯಾಣಿಸಬೇಕಾಗುತ್ತದೆ. ಆದರೂ, ಇಂದಿಗೂ ಅವರು ಯಾವುದೇ ರೀತಿಯ ದುಶ್ಚಟಗಳನ್ನು ಮಾಡಿಲ್ಲ. ಏಕೆಂದರೆ ಅವರು ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡಿದ್ದಾರೆ. ಕ್ರಿಕೆಟ್ ತಂಡದ ಉಳಿದವರೆಲ್ಲರೂ ದುಶ್ಚಟಗಳನ್ನು ರೂಢಿಸಿಕೊಂಡಿದ್ದಾರೆ. ಆದರೆ ಅವರ ಕುಟುಂಬಗಳಿಂದ ಅದಕ್ಕೆ ಯಾವುದೇ ನಿರ್ಬಂಧವಿಲ್ಲ” ಎಂದು ರಿವಾಬಾ ಹೇಳಿದ್ದಾರೆ. ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
“ಒಮ್ಮೆ ನಾವು ಜೀವನದಲ್ಲಿ ಪ್ರಗತಿ ಸಾಧಿಸಿದ ನಂತರ ನಡೆದುಬಂದ ಹಾದಿಯನ್ನು ಮರೆಯಬಾರದು. ನಮ್ಮ ಸಾಂಸ್ಕೃತಿಕ ಬೇರುಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ” ಎಂದು ರಿವಾಬಾ ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ | SIT ತನಿಖೆಗೆ ಆಗ್ರಹ


















