ಶ್ರೋತ್ರಿಯೋ ವೃಜಿನೋಕಾಮಹತೋ ಯೋ ಬ್ರಹ್ಮವಿತ್ತಮಃ|
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ|
ಅಹೇತುಕ ದಯಾಸಿಂಧುರ್ಬಂಧುರಾನಮತಾಂ ಸತಾಮ್
ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವ-ಪ್ರಶ್ಯಯ-ಸೇವನೈಃ
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇಜ್ಞಾತವೈಮಾತ್ಮನಃ
-ವಿವೇಕ ಚೂಡಾಮಣಿ
ಯಾವ ವ್ಯಕ್ತಿ ಶ್ರೋತ್ರಿಯನೊ ಪಾಪರಹಿತನೊ ಕಾಮವಿಲ್ಲದವನೊ ಬ್ರಹ್ಮವಿದರಲ್ಲಿ ಶ್ರೇಷ್ಠನೊ ಬ್ರಹ್ಮದಲ್ಲಿ ನೆಲೆಸಿರುವವನೊ, ಉರಿಯುವ ಶಾಂತ ಬೆಂಕಿಯಂಥವನೊ,ಯಾವ ಪ್ರತಿಫಲವನ್ನೂ ಬಯಸದೆ ದಯಾಸಿಂಧುವಾಗಿರುವವನೊ ನಮಿಸಿದ ಸಾಧುಗಳಿಗೆ ಬಂಧುವೊ ಅಂಥ ಗುರುವನ್ನು ಭಕ್ತಿಯಿಂದ ಆರಾಧಿಸಬೇಕು. ನಮ್ರತೆ ವಿನಯ ಸೇವೆ ಇವುಗಳಿಂದ ಪ್ರಸನ್ನನಾದ ಅವನ ಬಳಿ ಸಾರಿ ತಾನು ತಿಳಿಯಬೇಕು ಎಂದಿರುವುದನ್ನು ಕೇಳಿ ತಿಳಿದುಕೊಳ್ಳಬೇಕು. ಇಂತಹ ಗುರುವೇ ನಿಜವಾದ ಅರ್ಥದಲ್ಲಿ ಶಿಕ್ಷಕನಾಗಬಲ್ಲವನು.
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಶಿಕ್ಷಕರಾಗಿದ್ದ ‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್’ ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ ೫ ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ “ಸೆಪ್ಟೆಂಬರ್ ೫ “ನ್ನು ‘ಶಿಕ್ಷಕರ ದಿನ’ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ(೧೯೬೨) ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಸೇವೆಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ.
ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ ೫ ರಂದು “ವಿಶ್ವ ಶಿಕ್ಷಕರ ದಿನ” ವನ್ನು ಆಚರಿಸಬೇಕೆಂದು “ಯುನೆಸ್ಕೋ ” ಕರೆ ನೀಡಿದೆ. ೧೯೬೬ ರ ಅಕ್ಟೋಬರ್ ೫ ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ ೧೯೯೪ ರ ಅಕ್ಟೋಬರ್ ೫ ರಿಂದ “ವಿಶ್ವ ಶಿಕ್ಷಕರ ದಿನ”ವನ್ನಾಚರಿಸಲಾಗುತ್ತದೆ.
ಭಾರತದಲ್ಲಿನ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯ ಸಾಧಕ- ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಲೇ ಬಂದಿವೆ.
ಸಮಾಜದಲ್ಲಿ ಗುರುತರವಾದ ಜವಾಬ್ದಾರಿ ಗುರುವಿನ ಮೊದಲಿಗಿಂತಲೂ ತುಸು ಹೆಚ್ಚಿದೆ. ಆಧುನಿಕ ಶಿಕ್ಷಣ ಗುರುವಿನ ಮಹತ್ತನ್ನು ಕಡಿಮೆಯಾಗಿಸದೆ ಹೆಚ್ಚಿಸಿದೆ ಎಂದೇ ಹೇಳಬಹುದು. ಪಠ್ಯಕ್ರಮ, ಶಾಲಾ-ಕಾಲೇಜುಗಳ ಮೂಲಸೌಕರ್ಯ, ಬೋಧನಾ ವಿಧಾನ ಮತ್ತು ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲವೂ ‘ಆಧುನಿಕ ಶಿಕ್ಷಣ’ದ ಭಾಗವಾಗಿರುತ್ತದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ, ಭಾಷೆ ಮತ್ತು ಧರ್ಮ ಆಧಾರಿತ ಮೀಸಲಾತಿಗಳನ್ನು ಅನೇಕ ಜನರು ಟೀಕಿಸುತ್ತಾರೆ. ಶಿಕ್ಷಕರು ಅದರ ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಜಿಜ್ಞಾಸೆ ಇಂದು ನೆನ್ನೆಯದಲ್ಲ. ಪೋಷಕರ ನಂತರ, ಶಿಕ್ಷಕರು ಮಗುವಿಗೆ ಅತ್ಯಂತ ಸಾಮಾನ್ಯ ಮಾದರಿ ವ್ಯಕ್ತಿ. ವಿದ್ಯಾರ್ಥಿಗಳಿಗೆ, ಶಿಕ್ಷಕರು ಜ್ಞಾನ, ಮಾಹಿತಿ ಮತ್ತು ಬುದ್ಧಿವಂತಿಕೆಯ ಸಾರಾಂಶ. ದಯೆ ಮತ್ತು ಗೌರವವು ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸಂಯೋಜಿಸುವ ಎರಡು ಗುಣಗಳಾಗಿವೆ.
ವಿದ್ಯಾರ್ಥಿಗಳು ಹೆಚ್ಚಾಗಿ ತಮ್ಮ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಲು ಶ್ರಮಿಸುತ್ತಾರೆ, ಅವರು ತಮ್ಮನ್ನು ತಾವು ಹತ್ತಿರದಿಂದ ಕಂಡುಕೊಳ್ಳುವ ಮತ್ತು ಮೆಚ್ಚುವ ಶಿಕ್ಷಕರ ಆಧಾರದ ಮೇಲೆ. ವಿದ್ಯಾರ್ಥಿಗಳ ಕಡೆಗೆ ದಯೆ ಮತ್ತು ಸಹಾನುಭೂತಿಯ ವರ್ತನೆಯನ್ನು ಪ್ರದರ್ಶಿಸಿದರೆ, ಯಾವಾಗಲೂ ಸಕಾರಾತ್ಮಕವಾಗಿ ಸ್ವೀಕರಿಸಲಾಗುತ್ತದೆ. ಹೀಗಾಗಿ, ಶಿಕ್ಷಕರು ಅದೇ ಗುಣವನ್ನು ಪ್ರದರ್ಶಿಸಿದಾಗ, ಅವರು ಕಲಿಯುವವರಿಗೆ ಮಾದರಿಯಾಗುತ್ತಾರೆ.
ಇದಲ್ಲದೆ, ವಿದ್ಯಾರ್ಥಿಯು ನೀಡಿದ ವಿಷಯವನ್ನು ಎಷ್ಟು ಚೆನ್ನಾಗಿ ಗ್ರಹಿಸಿದ್ದಾನೆ ಎಂಬುದನ್ನು ಪರೀಕ್ಷಿಸುವಾಗ ಮತ್ತು ಅಗತ್ಯ ಪ್ರತಿಕ್ರಿಯೆ ನೀಡುವಾಗ, ವಿವಿಧ ಕಲಿಯುವವರಲ್ಲಿ ಕಂಡುಬರುವ ವೈಯಕ್ತಿಕ ವ್ಯತ್ಯಾಸಗಳ ಆಧಾರದ ಮೇಲೆ ಬೋಧನಾ ವಿಧಾನಗಳನ್ನು ಸರಿಹೊಂದಿಸುವಾಗ ಮೌಲ್ಯಮಾಪನವು ಶಿಕ್ಷಕರು ನಿರ್ವಹಿಸುವ ಪ್ರಮುಖ ಭಾಗವಾಗಿದೆ. ಇದಲ್ಲದೆ, ಅವರು ಪೋಷಕರು ಮತ್ತು ಸಮುದಾಯಗಳೊಂದಿಗೆ ಪಾಲುದಾರರಾಗುತ್ತಾರೆ, ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಬೆಳವಣಿಗೆಯ ಅವಕಾಶಗಳು ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಬಲವಾದ ಬೆಂಬಲ ಜಾಲಗಳು ಲಭ್ಯವಿರುತ್ತವೆ, ಇದರಿಂದಾಗಿ ಅವರ ಕೆಲಸವು ಹಿಂದೆಂದಿಗಿಂತಲೂ ಹೆಚ್ಚು ತೃಪ್ತಿಕರವಾಗಿರುತ್ತದೆ. ಆದ್ದರಿಂದ, ಕೊನೆಯಲ್ಲಿ, ಬೋಧನಾ ವೃತ್ತಿಯು ನಿರ್ದೇಶನಗಳನ್ನು ನೀಡುವುದರ ಸುತ್ತ ಸುತ್ತುವ ಅನೇಕ ಜವಾಬ್ದಾರಿಗಳಿಂದ ನಿರೂಪಿಸಲ್ಪಟ್ಟಿದೆ ಎಂದು ನಾವು ಹೇಳಬಹುದು; ತರಬೇತಿ; ಜೀವನ ಅನುಭವಗಳ ಮೂಲಕ ಜನರಿಗೆ ಸಮಾಲೋಚನೆ/ಸಲಹೆ ನೀಡುವುದು ಅಥವಾ ಮಾರ್ಗದರ್ಶನ ನೀಡುವುದು ಇವು ಔಪಚಾರಿಕ/ಅನೌಪಚಾರಿಕ ಸಂದರ್ಭಗಳಲ್ಲಿ ಸಂದರ್ಭೋಚಿತವಾಗಿ ನಡೆಯಬಹುದು.
ಶಿಕ್ಷಕರು ತಮ್ಮ ಕೆಲಸದ ಸ್ವರೂಪ ಮತ್ತು ವ್ಯಾಪ್ತಿಯಿಂದಾಗಿ ವಿದ್ಯಾರ್ಥಿಗಳು ಮತ್ತು ಸಮಾಜದ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದು ಈಗ ಸ್ಪಷ್ಟ, ನಿರ್ವಿವಾದದ ಸಾಮಾಜಿಕ ಸತ್ಯವಾಗಿದೆ. ಸಮಾಜದ ಸಕ್ರಿಯ ಪ್ರೇರಕರಾಗಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಮಾಹಿತಿಯುಕ್ತ, ಸಮರ್ಥ ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಪ್ರಭಾವವು ತರಗತಿ ಮಟ್ಟದಲ್ಲಿ ನಿಲ್ಲುವುದಿಲ್ಲ, ಬದಲಿಗೆ ಸಮುದಾಯಗಳ ಹಾಗೂ ಒಟ್ಟಾರೆ ಸಮಾಜದ ಭವಿಷ್ಯದ ಮಾರ್ಗವನ್ನು ನಿರ್ಧರಿಸುತ್ತದೆ.
ವಾಸ್ತವವಾಗಿ, ಶಿಕ್ಷಕರ ಪಾತ್ರವು ಸಂಕೀರ್ಣವಾಗಿದೆ ಏಕೆಂದರೆ ಅವರು ಜ್ಞಾನದ ಪ್ರಸರಣಕಾರರು ಮತ್ತು ಕಲಿಕೆಯ ಪ್ರಕ್ರಿಯೆಯ ಸುಗಮಕಾರರಿಗಿಂತ ಹೆಚ್ಚಿನದಾಗಿದೆ. ಶಿಕ್ಷಕರು ಜನರಿಗೆ ಶಿಕ್ಷಣ ನೀಡುತ್ತಾರೆ ಮತ್ತು ರೂಪಿಸುತ್ತಾರೆ ಮತ್ತು ಪರಿಣಾಮವಾಗಿ ಜನರು ಉತ್ತಮ ವ್ಯಕ್ತಿಗಳಾಗಲು ಶಿಕ್ಷಣ, ಸಬಲೀಕರಣ ಮತ್ತು ಪ್ರೋತ್ಸಾಹಿಸುವ ಮೂಲಕ ನಮ್ಮ ಸಮಾಜವನ್ನು ರೂಪಿಸುವಲ್ಲಿ ಸಹಾಯ ಮಾಡುತ್ತಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಮಾಹಿತಿಯುಕ್ತ ಸಮಾಜವನ್ನು ಸೃಷ್ಟಿಸುತ್ತಾರೆ.
ಇಡೀ ಯುವಪೀಳಿಗೆಯನ್ನು ವಿದ್ಯಾರ್ಥಿಗಳೆಂದು ತಾನೊಬ್ಬ ಶಿಕ್ಷಕನೆಂದುಕೊಳ್ಳುವುದು ಅಹಮ್ಮಿನ ಮೆಟ್ಟೆಲು, ಗುರುವಾದವನು ಶಿಷ್ಯನನ್ನು ಆರಿಸಿಕೊಳ್ಳುವುದು ಹೇಗೋ ಅದೇ ರೀತಿ ಗುರುವನ್ನು ಕೂಡ ಪರೀಕ್ಷಿಸಿ ಆರಿಸಿಕೊಳ್ಳುವುದೂ ಶಿಷ್ಯ ಸಂಪ್ರದಾಯ. ಇದ್ಯಾವುದೂ ಇಲ್ಲದೆ ಅದು ಹೇಗೆ ಒಬ್ಬ ವ್ಯಕ್ತಿ ಶಿಕ್ಷಕನಾಗುತ್ತಾನೆ? ಮತ್ತೊಂದು ಅಂಶವೆಂದರೆ ’ಸಂಕಟ’ದ್ದು. ಅವಕಾಶವಾದದ ಸಂಕಟ ಮೊಸಳೆ ಕಣ್ಣೀರು. ಇದು ನಿಚ್ಚಳವಾಗಿ ಕಾಣುತ್ತಿದೆ. ಶಿಕ್ಷಣವೀಯುವವನು ಶಿಕ್ಷಕನಾಗುತ್ತಾನೆ. ತಪ್ಪಿದ್ದರೆ ತಿದ್ದುವವನು ಶಿಕ್ಷಕನಾಗುತ್ತಾನೆ, ರಕ್ಷಣೆಗರ್ಹನಾದವನನ್ನು ರಕ್ಷಿಸುವವನು ಶಿಕ್ಷಕನಾಗುತ್ತಾನೆ.
ಇಂತಹ ಶಿಕ್ಷಕರ ಸಂಖ್ಯೆ ಹೆಚ್ಚಲಿ ಎನ್ನುವ ಆಶಯದೊಂದಿಗೆ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು.
ಮೇಲೋಗರ: ರಾಜ್ಯದ ಘನವೆತ್ತ ಪ್ರಭಾವಿ ರಾಜಕಾರಣಿಯೊಬ್ಬರು ಸದನದಲ್ಲೇ ಥೇಟ್ ಹಳೆಯ ಕಾಲದ ಮೇಷ್ಟ್ರಂತೆ ವ್ಯಾಕರಣ ಬೋಧನೆಗೆ ಮುಂದಾದರು, ಮೊದಲೇ ವಿಧಾನಸಭಾ ಕಲಾಪ ಕೇಳಬೇಕೆ?. ಸಂಧಿ ಸಮಾಸಗಳ ಬಗ್ಗೆಯೂ ಗುರುತರ ಚರ್ಚೆ ಸಾಗಿತ್ತು, ಆಗಮ ಆದೇಶ ಸಂಧಿಗಳ ಬಗ್ಗೆ ಹೇಳುತ್ತಿರುವಂತೆಯೇ ಮಧ್ಯದಲ್ಲೇ ನುರಿತ ರಾಜಕೀಯ ಧುರೀಣ ಶಾಸಕರು “ರಾಜಕಾರಣಿಗಳಿಗೆ ಎಲ್ಲ ಸಂಧಿಗಳು ಗೊತ್ತಿದೆ ಎಲ್ಲ ಸಂಧಿಗಳಲ್ಲೇ ನುಗ್ಗಿದ್ದರಿಂದಲೇ ನಾವೆಲ್ಲ ರಾಜಲಾರಾಣಿಗಳಾಗಿದ್ದು” ಎಂದಾಗ ವಿಧಾನ ಸಭೆಯಲ್ಲಿ ವಿಧವಿಧವಾಗಿ ನಗು ಹೊರಹೊಮ್ಮಿತ್ತು.

-ರಾಜ್ ಆಚಾರ್ಯ, ಸಾಹಿತಿಗಳು