ಪ್ರೀತಿಯ ಟೀಚರಿಗೆ,
ನಮಸ್ತೇ ಟೀಚರ್, ಹೇಗಿದ್ದೀರಿ …
ಹೀಗೊಂದು ಪತ್ರ ಬರೆಯಬೇಕೆಂದು ನಾನು ತುಂಬಾ ದಿನಗಳಿಂದ ಯೋಚಿಸಿದ್ದೆ.ಸಮಯ ಮತ್ತು ಕೆಲಸದ ನಡುವೆ ಪತ್ರಕ್ಕಾಗಿ ಬಿಡುವು ಎಂಬುದು ಸಿಗುವುದು ಕಷ್ಟವೇ.. ಅಂದ ಹಾಗೆ ಈಗ ನಾನೂ ನಿಮ್ಮಂತೆ ಟೀಚರಾಗಿದ್ದೇನೆ. ನೀವು ತಿದ್ದಿ-ತೀಡಿ ,ಬರೆಸಿ-ಒಲವುಣಿಸಿ ಬೆಳೆಸಿದ ಈ ನಿಮ್ಮ ವಿದ್ಯಾರ್ಥಿ ನಿಮ್ಮಂತೆ ವಿದ್ಯಾರ್ಥಿಗಳನ್ನು ಹೊಂದಿದ್ದರೆ ಅದರ ಹಿಂದೆ ಇರುವ ನಿಮ್ಮನ್ನು ನೆನೆಯಲೇ ಬೇಕು.
ಬಿಡುವುಗಳಿಲ್ಲದ ಸಮಯದಲ್ಲೂ ಮನೆ ಮತ್ತು ಶಾಲೆ ಎರಡನ್ನೂ ಅದು ಹೇಗೆ ನೀವು ನಿರ್ವಹಿಸಿದ್ದೀರೋ ಅಚ್ಚರಿಯೇ ಸರಿ.ಬೆಳಗಾದರೆ ಶುರು ಆಗುವ ನಿಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಶಾಲೆಯಲ್ಲಿ ಒಂದು ಗಂಟೆ ಬಿಡುವು ಸಿಕ್ಕರೂ ಅಲ್ಲೂ ಏನೋ ಕೆಲಸದಲ್ಲೇ ಇದ್ದದ್ದು ನಾನು ಎಷ್ಟೋ ಬಾರಿ ಕಂಡಿದ್ದೇನೆ. ಇನ್ನು ಕೆಲವೊಮ್ಮೆ ಬೆಳಗ್ಗಿನ ಉಪಹಾರವನ್ನೂ ಸೇವಿಸದೇ ಬಸ್ಸಿಗಾಗಿ ಓಡಿ ಬರುವುದನ್ನೂ ಕಂಡಿದ್ದೆ. ಅವಾಗೆಲ್ಲ ನನಗೆ ಇಷ್ಟವಾದದ್ದು ಕೆಲಸದ ಮೇಲಿನ ನಿಮ್ಮ ಪ್ರಾಮಾಣಿಕತೆ.
ದಣಿವರಿಯದೆ,ಸತತವಾಗಿ ಮಾತಾಡುವ ನಿಮ್ಮ ಮಾತಿನ ವೈಖರಿಗೆ ,ಹೇಳುವ ಪ್ರತಿ ಮಾತಲ್ಲೂ ಅಡಗಿರುವ ಆ ಉಪದೇಶದ ಪ್ರೀತಿಗೆ ನಾನು ಸೋತಿದ್ದೆ. ಒಮ್ಮೆ ನೀವು ನನ್ನ ಗೆಳತಿಗೆ ಬೈದು,ಏಟು ನೀಡಿದಾಗ ಅವಳಷ್ಟೇ ನನಗೂ ಬೇಸರವಾಗಿತ್ತು. ಆದರೆ ಸ್ಟಾಫ್ ರೂಮಿಗೆ ಕರೆಸಿ ಅವಳ ತಲೆ ನೇವರಿಸಿ ಪ್ರೀತಿಯ ಮಾತಾಡಿದಾಗಲಷ್ಟೇ ನಿಮ್ಮ ಕೋಪದ ಹಿಂದಿನ ಕಾಳಜಿಯ ಅರಿವು ನಮಗಾದದ್ದು. ಅವಾಗೆಲ್ಲ ನನಗೆ ಇಷ್ಟವಾದದ್ದು ಕೋಪದ ಹಿಂದೆ ಇರುವ ನಿಮ್ಮ ಮಮತೆ.
ನಾನೂ ಆಲೋಚಿಸಿದ್ದುಂಟು ಒಂದಿನವು ಬಿಡದೆ ದಿನವೂ ಶಾಲೆಗೆ ನೀವು ಹಾಜರಾಗುತ್ತಿದ್ದ ಬಗೆ ಹೇಗೆ? ವರ್ಷದಲ್ಲಿ ಒಮ್ಮೆಯಾದರೂ ಎಲ್ಲರಿಗು ಕಾಡುವ ಜ್ವರ ನಿಮ್ಮನ್ನು ಕಾಡಿಲ್ಲವೇ ? ಸಿಗುವ ಫ್ರೀ ಪೀರಿಯಡ್ ಗಳಲ್ಲೂ ನಮ್ಮನ್ನು ಕರೆಸಿ ತರಗತಿ ತೆಗೆಯುವ ರೀತಿ? ಇದೆಲ್ಲ ಹೇಗೆ ಅಂತ. ಮತ್ತೆ ಆಸ್ಪತ್ರೆಯಲ್ಲೊಂದು ದಿನ ಕಂಡಾಗಲೇ ಗೊತ್ತಾಗಿದ್ದು ಕಾಡುವ ಜ್ವರದಲ್ಲೂ ನೀವು ಅದೇ ಉತ್ಸಾಹದಿಂದ ಕಲಿಸಿದ್ದೀರಿ ಎಂದು, ಇನ್ನೊಂದು ಟೀಚರಿಗೆ ಸಹಾಯವಾಗಲೆಂದು ನೀವು ಫ್ರೀ ಪಿರಿಯಡ್ ಬಳಸಿದ್ದೀರಿ ಎಂದು, ಕೊನೆ ನಿಮಿಷದಲ್ಲಿ ಮಕ್ಕಳಿಗೆ ಕಷ್ಟವಾಗಬಾರದೆಂದು ಸಿಲ್ಲಬಸ್ ಎಲ್ಲವನ್ನು ಮುಗಿಸುವ ಬಗೆ ಇದೆಂದು.. ಅವಾಗೆಲ್ಲ ನನಗೆ ಇಷ್ಟವಾದದ್ದು ನಿಮ್ಮ ಆದರ್ಶತೆ.
ಇದೆಲ್ಲ ಕಳೆದು ಹೈ ಸ್ಕೂಲಿಗೆ ಕಾಲಿಟ್ಟಾಗಲೂ, ಕಾಲೇಜಿಗೆ ಕಾಲಿಟ್ಟಾಗಲೂ ನಿಮ್ಮಂತೆ ಹಲವು ಟೀಚರುಗಳನ್ನು ಕಂಡೆ. ಬಹಳ ಸಲ ನಿಮ್ಮ ಕೈ ಖಾಲಿ ಆದದ್ದು ಕಂಡಿದ್ದೇನೆ,ಆದರೆ ವಿದ್ಯೆ ನೀಡುವುದರಲ್ಲಿ ಎಂದು ಖಾಲಿತನ ಕಾಣಲೇ ಇಲ್ಲ. ಸ್ನೇಹಿತರಾಗಿರುವ ಅಧ್ಯಾಪಕರ ಮುಂದೆ ನಿಮ್ಮ ಕಣ್ಣಂಚು ತೇವವಾಗಿದ್ದನ್ನು ಕಂಡಿದ್ದೇನೆ ಆದರೆ ತರಗತಿಯಲ್ಲಿ ನಗುವಿನ ಕೊರತೆ ಕಾಣಲೇ ಇಲ್ಲ, ಮಧ್ಯಾಹ್ನ ಖಾಲಿ ಬುತ್ತಿಯಲ್ಲೇ ಹಸಿವು ನೀಗಿಸಿದ್ದನ್ನು ಎಷ್ಟೋ ಬಾರಿ ಕಂಡಿದ್ದೇನೆ, ಆದರೆ ವಿನಯತೆಯಲ್ಲಿ ಎಂದೂ ಕಡಿಮೆ ಕಂಡದ್ದೇ ಇಲ್ಲ.. ನಿದ್ದೆ ಇಲ್ಲದ ರಾತ್ರಿಗಳ ಸನ್ನೆ ನಿಮ್ಮ ಕಣ್ಣಿನಲ್ಲಿ ಕಂಡಿದ್ದೇನೆ ಆದರೆ ಭರವಸೆ ಮತ್ತು ಧೈರ್ಯದ ಕುಂದು ಕಾಣಲೇ ಇಲ್ಲ.
ಕಲಿಸಿದಿರಿ,ನಗಿಸಿದಿರಿ,ಉಪದೇಶವಿತ್ತಿರಿ,ಕೆಲವೊಮ್ಮೆತಾಯಿಯಾದಿರಿ, ಗೆಳತಿ-ಗೆಳೆಯನಾದಿರಿ, ಮತ್ತೊಮ್ಮೆ ಅಣ್ಣನಂತೆ-ಅಕ್ಕನಂತೆ ಕಾಣುವಿರಿ, ಕೋಪಿಸಿದಿರಿ, ಹತಾಶರಾದವರಿಗೆ ಆಶಾ ಭಾವನೆ ನೀಡಿದಿರಿ, ಧೈರ್ಯವಿತ್ತಿರಿ , ನಮ್ಮೊಳಗಿನ ನಮ್ಮನ್ನು ಎತ್ತಿ ತೋರಿಸಿದಿರಿ, ಬದುಕಿಗೊಂದು ದಾರಿ ತೋರಿದಿರಿ.ಇಷ್ಟೆಲ್ಲಾ ಮಾಡಿದ ನಿಮಗಂತೂ ಸಾಟಿ ನೀವೇ ಸರಿ.. ಹೇಳುತ್ತಾ ಹೋದರೆ ಕೊನೆಗೆ ಪತ್ರ ನೀಳವಾಗುವುದೇನೋ.. ಹಾಗಾಗಿ ಕೊನೆಯದೊಂದೇ ಮಾತು
ಒಲವನ್ನಿತ್ತು ಅಕ್ಷರ ಕಲಿಸಿದ ನಿಮ್ಮಂತ ಎಲ್ಲಾ ಶಿಕ್ಷಕರಿಗೂ ತುಂಬು ಮನಸಿನಿಂದ ಶಿಕ್ಷರ ದಿನದ ಹಾರ್ದಿಕ ಶುಭಾಶಯಗಳು.

-ದೀಕ್ಷಿತಾ ಆಚಾರ್ಯ, ಹೊಸಂಗಡಿ