ಬೆಂಗಳೂರು : ಶಾಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ವಿದ್ಯಾರ್ಥಿ ನಾಯಕನಾಗಿದ್ದ ನಾನು, ಚಿಕ್ಕವಯಸ್ಸಿನಲ್ಲಿಯೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದೆ. ಅಂದಿನ ಮಹಾನ್ ನಾಯಕರಾಗಿದ್ದ ಶ್ರೀ ಎಸ್ ಬಂಗಾರಪ್ಪ, ಶ್ರೀ ವೀರಪ್ಪ ಮೊಯ್ಲಿ, ಶ್ರೀ ರಾಮಕೃಷ್ಣ ಹೆಗಡೆ ಸೇರಿದಂತೆ ಇನ್ನಿತರ ನಾಯಕರು ಅಸೆಂಬ್ಲಿಯಲ್ಲಿ ವಿಷಯಾಧಾರಿತ ಚರ್ಚೆ ನಡೆಸಿದಾಗ ನಾನು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂಬ ಭಾವನೆ ಮೂಡಿತು. ಸಚಿವನಾದ ಬಳಿಕ ಪದವಿ ಪಡೆದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ಇಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೆಪಿಸಿಸಿ ಶಿಕ್ಷಕರ ಘಟಕದಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ‘ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಂತ್ರಿ ಆದ ಸಂತೋಷಕ್ಕಿಂತ ಹೆಚ್ಚು ಸಂತಸ ನಾನು ಪದವಿ ಪಡೆದಾಗ ಆಯ್ತು. ಕೃಷಿಕ, ಶ್ರಮಿಕ, ಸೈನಿಕ, ಶಿಕ್ಷಕ ಸಮಾಜದ ಆಧಾರ ಸ್ತಂಭಗಳು. ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ಶಿಕ್ಷಕರು ರಾಷ್ಟ್ರ ನಿರ್ಮಿಸುವ ಶಿಲ್ಪಿಗಳು ಎಂದು ಅವರು ಅಭಿಪ್ರಾಯ ಪಟ್ಟರು.
ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಪರಿಹಾರ ತರಬೇಕೆಂದು ಸಿಎಸ್‌ಆರ್ ಪಾಲಿಸಿ ತರಬೇಕೆಂದು ನಾವು ಯೋಜನೆ ರೂಪಿಸುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಪಂಚಾಯತಿ ಮಟ್ಟದಲ್ಲಿ ಸಿಎಸ್‌ಆರ್ ಯೋಜನೆಯಡಿ 2000 ಶಾಲೆಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.