ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಶಿಕ್ಷಣ ಕ್ಷೇತ್ರವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ವರದಿಯಾಗಿದೆ. ನಗರದ ಪ್ರತಿಷ್ಠಿತ ಶಾಲೆಯೊಂದರ 40 ವರ್ಷದ ಶಿಕ್ಷಕಿಯೊಬ್ಬರು ತನ್ನ 16 ವರ್ಷದ ವಿದ್ಯಾರ್ಥಿಗೆ ಆತಂಕ ನಿವಾರಕ ಮಾತ್ರೆಗಳನ್ನು ನೀಡಿ, ಕಳೆದ ಒಂದು ವರ್ಷದಿಂದ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಶಿಕ್ಷಕಿ ಮತ್ತು ಆಕೆಯ ಗೆಳತಿಯನ್ನು ಬಂಧಿಸಿದ್ದಾರೆ.
ವಿವಾಹಿತರಾಗಿರುವ ಹಾಗೂ ಮಕ್ಕಳನ್ನು ಹೊಂದಿರುವ ಈ ಮಹಿಳಾ ಶಿಕ್ಷಕಿ, 11ನೇ ತರಗತಿಯ ವಿದ್ಯಾರ್ಥಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಡಿಸೆಂಬರ್ 2023ರಲ್ಲಿ ಶಾಲೆಯ ವಾರ್ಷಿಕ ಕಾರ್ಯಕ್ರಮದ ನೃತ್ಯ ತಂಡ ರಚನೆಯ ವೇಳೆ ವಿದ್ಯಾರ್ಥಿಯ ಮೇಲೆ ಆಕೆಗೆ ಆಕರ್ಷಣೆ ಉಂಟಾಗಿದೆ. ಜನವರಿ 2024ರಿಂದಲೇ ವಿದ್ಯಾರ್ಥಿಗೆ ಲೈಂಗಿಕ ಸನ್ನೆಗಳನ್ನು ನೀಡಲು ಆರಂಭಿಸಿದ್ದಾರೆ.
ಆದರೆ, ವಿದ್ಯಾರ್ಥಿ ಆರಂಭದಲ್ಲಿ ಶಿಕ್ಷಕಿಯಿಂದ ದೂರವಿರಲು ಪ್ರಯತ್ನಿಸಿದ್ದಾನೆ. ಆಗ ಶಿಕ್ಷಕಿ, ಶಾಲೆಯ ಹೊರಗಿರುವ ತನ್ನ ಗೆಳತಿಯ ಸಹಾಯ ಪಡೆದಿದ್ದಾರೆ. ಆ ಗೆಳತಿ ವಿದ್ಯಾರ್ಥಿಯನ್ನು ಸಂಪರ್ಕಿಸಿ, “ಹಿರಿಯ ಮಹಿಳೆಯರು ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧಗಳು ಈಗ ಸಾಮಾನ್ಯ,” ಎಂದು ಬ್ರೈನ್ ವಾಶ್ ಮಾಡಿದ್ದಾರೆ. ಅಲ್ಲದೆ, “ನೀನು ಮತ್ತು ಆ ಶಿಕ್ಷಕಿ ಪರಸ್ಪರ ಹೊಂದಿಕೊಂಡಿದ್ದೀರಿ” ಎಂದು ಹೇಳಿ ವಿದ್ಯಾರ್ಥಿಯನ್ನು ಭೇಟಿ ಮಾಡಲು ಪ್ರೇರೇಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾತ್ರೆ, ಮದ್ಯಪಾನ ಬಳಸಿ ದೌರ್ಜನ್ಯ
ವಿದ್ಯಾರ್ಥಿಯು ಭೇಟಿಗೆ ಒಪ್ಪಿದ ನಂತರ, ಶಿಕ್ಷಕಿ ಅವನನ್ನು ತನ್ನ ಕಾರಿನಲ್ಲಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿ ತೀವ್ರ ಆತಂಕಕ್ಕೊಳಗಾದಾಗ, ಶಿಕ್ಷಕಿ ಅವನಿಗೆ ಆತಂಕ ನಿವಾರಕ ಮಾತ್ರೆಗಳನ್ನು ನೀಡಿದ್ದಾರೆ. ಈ ಮಾತ್ರೆಗಳ ಪರಿಣಾಮವಿದ್ದಾಗಲೇ ಶಿಕ್ಷಕಿ ವಿದ್ಯಾರ್ಥಿಗೆ ಮದ್ಯಪಾನ ಮಾಡಿಸಿ, ದಕ್ಷಿಣ ಮುಂಬೈ ಮತ್ತು ವಿಮಾನ ನಿಲ್ದಾಣದ ಸಮೀಪದ ಪಂಚತಾರಾ ಹೋಟೆಲ್‌ಗಳಿಗೆ ಕರೆದೊಯ್ದು ಪದೇ ಪದೇ ಲೈಂಗಿಕ ಸಂಬಂಧಗಳಿಗೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತನಿಖೆಗಾಗಿ ಶಿಕ್ಷಕಿಯ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ
ವಿದ್ಯಾರ್ಥಿಯ ನಡವಳಿಕೆಯಲ್ಲಿ ಭಾರೀ ಬದಲಾವಣೆ ಕಂಡುಬಂದ ಕಾರಣ ಆತನ ಕುಟುಂಬಕ್ಕೆ ಈ ಬಗ್ಗೆ ಅನುಮಾನ ಮೂಡಿದೆ. ಕುಟುಂಬದವರು ವಿಚಾರಿಸಿದಾಗ, ವಿದ್ಯಾರ್ಥಿ ತನ್ನ ಸಂಕಷ್ಟವನ್ನು ವಿವರಿಸಿದ್ದಾನೆ. ಇನ್ನೇನು ಶಾಲೆ ಮುಗಿದ ಬಳಿಕ ಶಿಕ್ಷಕಿಯ ತೊಂದರೆಯಿರುವುದಿಲ್ಲ ಎಂದು ಭಾವಿಸಿದ ಕುಟುಂಬವು, ಈ ವಿಷಯವನ್ನು ಬಹಿರಂಗಪಡಿಸದೇ ಗುಟ್ಟಾಗಿರಿಸಿತ್ತು.
ಆದರೆ, ವರ್ಷದ ಆರಂಭದಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಶಾಲೆ ಬಿಟ್ಟ ನಂತರವೂ ಶಿಕ್ಷಕಿ ತನ್ನ ಮನೆ ಕೆಲಸದ ಸಿಬ್ಬಂದಿಯ ಮೂಲಕ ವಿದ್ಯಾರ್ಥಿಯನ್ನು ಮತ್ತೆ ಸಂಪರ್ಕಿಸಿ ಭೇಟಿಯಾಗಲು ಕೇಳಿದಾಗ ಪರಿಸ್ಥಿತಿ ಹದಗೆಟ್ಟಿದೆ. ಆಗ ವಿದ್ಯಾರ್ಥಿಯ ಕುಟುಂಬವು ಬೇರೆ ದಾರಿಯಿಲ್ಲದೆ ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದೆ.
ಶಿಕ್ಷಕಿ ಮತ್ತು ಆಕೆಯ ಗೆಳತಿ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ ಗಳು, ಜೊತೆಗೆ ಐಪಿಸಿ (ಭಾರತೀಯ ದಂಡ ಸಂಹಿತೆ) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.