ಬೆಂಗಳೂರು: ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತನ್ನ ಕರಾಮತ್ತು ತೋರಿಸುತ್ತಿದೆ. ಎಐನಿಂದ ಉದ್ಯೋಗಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ತಜ್ಞರು ಸಮಾಧಾನದ ಮಾತುಗಳನ್ನು ಆಡುತ್ತಿದ್ದರೂ ಲಕ್ಷಾಂತರ ಉದ್ಯೋಗಗಳಿಗೆ ಕತ್ತರಿ ಹಾಕುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಐಟಿ ದೈತ್ಯ ಟಿಸಿಎಸ್ ಕಂಪನಿಯು 12 ಸಾವಿರ ಜನರಿಗೆ ಪಿಂಕ್ ಸ್ಲಿಪ್ ನೀಡಲು ತೀರ್ಮಾನಿಸಿದೆ.
ಹೌದು, ಜಗತ್ತಿನಾದ್ಯಂತ ಇರುವ ಟಿಸಿಎಸ್ ಘಟಕಗಳಲ್ಲಿ ಶೇ.2ರಷ್ಟು ಅಂದರೆ, 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ತೀರ್ಮಾನಿಸಿದೆ. ಕಂಪನಿಗೆ ಆಗುತ್ತಿರುವ ವೆಚ್ಚವನ್ನು ಕಡಿತಗೊಳಿಸಲು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ, ಕಂಪನಿಯಲ್ಲಿ ಎಐ ಬಳಕೆ ಹೆಚ್ಚಾಗಿರುವ ಕಾರಣದಿಂದಲೇ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದಾಗಿ ಉದ್ಯೋಗಿಗಳ ಅವಶ್ಯಕತೆ ಕಡಿಮೆಯಾಗಿದೆ. ಇದೇ ಕಾರಣಕ್ಕಾಗಿ ನೌಕರರನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರ ಮಧ್ಯೆಯೇ, ಭೌಗೋಳಿಕ ರಾಜಕೀಯ ಸಂಘರ್ಷದಿಂದಾಗಿ ಕಂಪನಿಗೆ ಜಾಗತಿಕವಾಗಿ ಹೆಚ್ಚು ಕ್ಲೈಂಟ್ ಗಳು ಸಿಗುತ್ತಿಲ್ಲ. ಇದು ಕೂಡ ಸಿಬ್ಬಂದಿಯ ಸಂಖ್ಯೆಯನ್ನು ಕಡಿತಗೊಳಿಸಲು ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
ಮುಂಬೈ ಮೂಲದ ಟಿಸಿಎಸ್ ಕಂಪನಿಯು ಜಗತ್ತಿನಾದ್ಯಂತ 6 ಲಕ್ಷಕ್ಕೂ ಅಧಿಕ ನೌಕರರನ್ನು ಹೊಂದಿದೆ. ಇತ್ತೀಚೆಗೆ, ಗೂಗಲ್, ಮೈಕ್ರೋಸಾಫ್ಟ್ ಸೇರಿ ಹತ್ತಾರು ಕಂಪನಿಗಳು ಕೂಡ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದರ ಹಿಂದೆಯೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಕೈವಾಡವಿದೆ ಎಂದೇ ಭಾವಿಸಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಟಿಸಿಎಸ್ ಕಂಪನಿಯು ತನ್ನ ಬೆಂಚ್ ನೀತಿಯನ್ನು ಬದಲಾಯಿಸಿತ್ತು. ಈಗ ಉದ್ಯೋಗಿಗಳ ಸಂಖ್ಯೆಯನ್ನೇ ಕಡಿತಗೊಳಿಸಲು ತೀರ್ಮಾನಿಸಿದೆ.