ಬೆಂಗಳೂರು: ತೆರಿಗೆ ವಂಚನೆ ಹಿನ್ನೆಲೆ ಬೆಳ್ಳಂಬೆಳಗ್ಗೆ ದೊರೆಸ್ವಾಮಿ ನಾಯ್ಡು ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳಾದ ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಕಾಲೇಜ್, ಹನುಮಂತನಗರ ಕಾಲೇಜ್, ಆಂಧ್ರದ ಕುಪ್ಪಂ ಕಾಲೇಜ್ ಸೇರಿದಂತೆ, ಕರ್ನಾಟಕ ರಾಜ್ಯ ಹಾಗೂ ಹೊರ ರಾಜ್ಯದಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ ಶಾಖೆಗಳ ಮೇಲೆ ಹಾಗೂ ಬನಶಂಕರಿ ಬಿಡಿಎ ಕಾಂಪ್ಲೇಕ್ಸ್ ಬಳಿಯ ದೊರೆಸ್ವಾಮಿ ನಾಯ್ಡು ಅವರ ಮನೆ ಮತ್ತು ದೊರೆಸ್ವಾಮಿ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಸುಮಾರು 100 ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ಎಲ್ಲಾ ಕಡೆ ದಾಳಿ ಮಾಡಿದ್ದು, ಸದ್ಯ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕೆ ಮೀರಿದ ಆಸ್ತಿಗಳಿಕೆ ಹಾಗೂ ತೆರಿಗೆ ವಂಚನೆ ಮಾಡಿರುವ ಆರೋಪ ಹಿನ್ನಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಪಿಇಎಸ್ ಶಿಕ್ಷಣ ಸಂಸ್ಥೆಯನ್ನು ದೊರೆಸ್ವಾಮಿಯ ಪುತ್ರ ಜವಹರ್ ದೊರೆಸ್ವಾಮಿ ನೋಡಿಕೊಳ್ಳುತ್ತಿದ್ದಾರೆ.



















