ಬೆಂಗಳೂರು: ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್, 2026ರ ಜನವರಿ ತಿಂಗಳಿನಲ್ಲಿ ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಹ್ಯಾರಿಯರ್, ಸಫಾರಿ, ನೆಕ್ಸಾನ್ ಮತ್ತು ಹೊಸದಾಗಿ ಬಿಡುಗಡೆಯಾದ ಕರ್ವ್ ಸೇರಿದಂತೆ ಪ್ರಮುಖ ಮಾಡೆಲ್‌ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ನಗದು ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್ ಮತ್ತು ಲಾಯಲ್ಟಿ ಬೋನಸ್‌ಗಳ ಮೂಲಕ ಗ್ರಾಹಕರು ಹೊಸ ಕಾರಿನ ಖರೀದಿಯ ಮೇಲೆ ಗಣನೀಯ ಉಳಿತಾಯ ಮಾಡಬಹುದಾಗಿದೆ.
ಹ್ಯಾರಿಯರ್ ಮತ್ತು ಸಫಾರಿ: ಎಸ್‌ಯುವಿ ಪ್ರೇಮಿಗಳಿಗೆ ಲಾಭ
ಟಾಟಾ ಸಂಸ್ಥೆಯ ಪ್ರೀಮಿಯಂ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿಯ ಮೇಲೆ ಗರಿಷ್ಠ 75,000 ರೂಪಾಯಿ ವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ 25,000 ನಗದು ರಿಯಾಯಿತಿ ಮತ್ತು 50,000 ರೂ. ವರೆಗಿನ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಆಫರ್ ಸೇರಿದೆ. ವಿಶೇಷವಾಗಿ 2025ರ ಮಾಡೆಲ್‌ನ ಹೈ-ಸ್ಪೆಕ್ ಡೀಸೆಲ್ ವೇರಿಯಂಟ್‌ಗಳ ಮೇಲೆ ಈ ರಿಯಾಯಿತಿ ಅನ್ವಯವಾಗಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪೆಟ್ರೋಲ್ ವೇರಿಯಂಟ್‌ಗಳೂ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಡಾರ್ಕ್ ಮತ್ತು ಸ್ಟೆಲ್ತ್ ಎಡಿಷನ್‌ಗಳ ಮೇಲೂ ಆಕರ್ಷಕ ಆಫರ್‌ಗಳು ಲಭ್ಯವಿವೆ.

ನೆಕ್ಸಾನ್ ಮತ್ತು ಪಂಚ್: ಜನಪ್ರಿಯ ಕಾರುಗಳ ಮೇಲೆ ಕಡಿತ
ಟಾಟಾದ ಅತಿ ಹೆಚ್ಚು ಮಾರಾಟವಾಗುವ ನೆಕ್ಸಾನ್ ಎಸ್‌ಯುವಿಯ ಮೇಲೆ ಈ ತಿಂಗಳು 50,000 ರೂ.ವರೆಗೆ ಉಳಿತಾಯ ಮಾಡಬಹುದು. ಇದು 10,000 ನಗದು ರಿಯಾಯಿತಿ, 20, 000 ರೂ.ಎಕ್ಸ್‌ಚೇಂಜ್ ಆಫರ್ ಮತ್ತು 20,000 ರೂ.ಲಾಯಲ್ಟಿ ಬೋನಸ್ ಅನ್ನು ಒಳಗೊಂಡಿದೆ. ಮತ್ತೊಂದೆಡೆ, ಜನವರಿ 13ರಂದು ಪಂಚ್ ಫೇಸ್‌ಲಿಫ್ಟ್ ಬಿಡುಗಡೆಯಾಗಲಿದ್ದು, ಪ್ರಸ್ತುತ ಇರುವ ಹಳೆಯ ಪಂಚ್ ಮಾಡೆಲ್‌ಗಳ ಮೇಲೆ 40,000 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದು ಸ್ಟಾಕ್ ಕ್ಲಿಯರೆನ್ಸ್ ಮಾಡಿಕೊಳ್ಳಲು ಸಂಸ್ಥೆ ಹಮ್ಮಿಕೊಂಡಿರುವ ಉತ್ತಮ ಅವಕಾಶವಾಗಿದೆ.
ಆಲ್ಟ್ರೋಜ್ ಮತ್ತು ಕರ್ವ್: ಹೊಸ ಮಾಡೆಲ್‌ಗಳಿಗೂ ರಿಯಾಯಿತಿ
ಕಳೆದ ವರ್ಷ ಬಿಡುಗಡೆಯಾದ ಫೇಸ್‌ಲಿಫ್ಟೆಡ್ ಆಲ್ಟ್ರೋಜ್ ಮೇಲೆ 25,000 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದ್ದರೆ, ಹಳೆಯ ಮಾಡೆಲ್‌ನ ಆಲ್ಟ್ರೋಜ್ ಕಾರ್ ಇನ್ನು ಕೂಡ ಸ್ಟಾಕ್‌ನಲ್ಲಿದ್ದರೆ ಅಂತಹ ಕಾರುಗಳ ಮೇಲೆ 85,000 ರೂ.ವರೆಗೆ ಬೃಹತ್ ಮೊತ್ತದ ರಿಯಾಯಿತಿ ಪಡೆಯಬಹುದಾಗಿದೆ. ಟಾಟಾ ಸಂಸ್ಥೆಯ ಹೊಸ ಸಂಚಲನ ‘ಕರ್ವ್’ (Curvv) ಕೂಪೆ-ಎಸ್‌ಯುವಿ ಮೇಲೆಯೂ ಸಂಸ್ಥೆಯು 40,000 ರೂ.ವರೆಗೆ ರಿಯಾಯಿತಿ ಘೋಷಿಸಿದೆ. ಇದರಲ್ಲಿ 20,000 ನಗದು ಮತ್ತು 20,000 ರೂ. ಎಕ್ಸ್‌ಚೇಂಜ್ ಬೋನಸ್ ಸೇರಿದೆ.
ಟಿಯಾಗೋ ಮತ್ತು ಟಿಗೋರ್: ಬಜೆಟ್ ಕಾರುಗಳ ಮೇಲೆ ಆಫರ್
ಟಾಟಾ ಟಿಯಾಗೋ ಹ್ಯಾಚ್‌ಬ್ಯಾಕ್ ಮತ್ತು ಟಿಗೋರ್ ಸೆಡಾನ್ ಖರೀದಿಸುವವರಿಗೆ 35,000 ರೂ.ವರೆಗೆ ಲಾಭ ಸಿಗಲಿದೆ. ಟಿಯಾಗೋದ ಬೇಸ್ ಮಾಡೆಲ್ (XE) ಹೊರತುಪಡಿಸಿ ಉಳಿದೆಲ್ಲಾ ವೇರಿಯಂಟ್‌ಗಳಿಗೆ ಈ ಆಫರ್ ಅನ್ವಯಿಸುತ್ತದೆ. 15,000 ರೂ. ನಗದು ರಿಯಾಯಿತಿ ಮತ್ತು 20,000 ರೂ.ಎಕ್ಸ್‌ಚೇಂಜ್ ಬೋನಸ್ ಮೂಲಕ ಈ ಕಾರುಗಳು ಜನವರಿ ತಿಂಗಳಿನಲ್ಲಿ ಇನ್ನಷ್ಟು ಅಗ್ಗವಾಗಿ ಲಭ್ಯವಿವೆ. ಈ ರಿಯಾಯಿತಿಗಳು ನಗರದಿಂದ ನಗರಕ್ಕೆ ವ್ಯತ್ಯಾಸವಿರಲಿದ್ದು, ಹತ್ತಿರದ ಡೀಲರ್‌ಗಳನ್ನು ಸಂಪರ್ಕಿಸಿ ನಿಖರ ಮಾಹಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ: ಹ್ಯುಂಡೈ ಸ್ಟಾರಿಯಾ ಎಲೆಕ್ಟ್ರಿಕ್ ಅನಾವರಣ | 400 ಕಿ.ಮೀ ರೇಂಜ್ ಮತ್ತು 9 ಸೀಟರ್ ಸಾಮರ್ಥ್ಯದ ಎಂಪಿವಿ



















