ಕೊಪ್ಪಳ: ಶಾಲಾ ಮಕ್ಕಳಿದ್ದ ಟಾಟಾ ಪಲ್ಟಿಯಾದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿದೆ.ಈ ಘಟನೆ ಕೊಪ್ಪಳ (Koppal) ತಾಲೂಕಿನ ಹಾಲವರ್ತಿ ಕ್ರಾಸ್ ಹತ್ತಿರ ನಡೆದಿದೆ.
ಕ್ರೀಡಾಕೂಟಕ್ಕೆಂದು ಬಂದಿದ್ದ ಹಾಲವರ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು, ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಮುಗಿಸಿ ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಟಾಟಾ ಏಸ್ ನಲ್ಲಿ ವಿದ್ಯಾರ್ಥಿಗಳು ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ವಾಹನಕ್ಕೆ ಆರ್ ಟಿಓ ಅಧಿಕಾರಿ ನಿಲ್ಲಿಸಲು ಸೂಚಿಸಿದ್ದಾರೆ. ಹೀಗಾಗಿ ದಿಢೀರ್ ಎಂದು ನಿಲ್ಲಿಸಲು ಹೋದ ಸಂದರ್ಭದಲ್ಲಿ ಅದು ಪಲ್ಟಿಯಾಗಿದೆ. ಪರಿಣಾಮ ಅದರಲ್ಲಿದ್ದ ಸುಮಾರು 30 ಮಕ್ಕಳು ಗಾಯಗೊಂಡಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಆರ್ ಟಿಓ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ ಟಿಓ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡ ಸ್ಥಳೀಯರು, ತಳ್ಳಾಡಿದ್ದಾರೆ. ಆರ್ಟಿಓ ಅಧಿಕಾರಿಯಿಂದಲೇ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಗಾಯಗೊಂಡಿರುವ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.