ಚಂದನವನದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಹಿಂದೂ ಸಂಪ್ರದಾಯದಂತೆ ವಿವಾಹ ಬಂಧಕ್ಕೆ ಒಳಗಾಗಿದೆ.

ಇಂದು (ಆ.11) ಬೆಳಿಗ್ಗೆ 10:50 ರಿಂದ 11:30 ರ ವರೆಗೆ ವಿವಾಹ ಮುಹೂರ್ತ ನಿಗದಿಯಾಗಿತ್ತು. ಈ ವೇಳೆ ಕುಟುಂಬಸ್ಥರು, ಸ್ನೇಹಿತರು, ಬಂಧುಗಳು, ಗುರು-ಹಿರಿಯರ ಸಮ್ಮುಖದಲ್ಲಿ ತರುಣ್ ಅವರು ಸೋನಲ್ ಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
ಮದುವೆಗೆ ದಕ್ಷಿಣ ಭಾರತದ ದೇವಾಲಯಗಳಿಂದ ಸ್ಪೂರ್ತಿ ಪಡೆದ ರೀತಿಯಲ್ಲಿ ಮಂಟಪ ವಿನ್ಯಾಸಗೊಳಿಸಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯೆ, ಕಮಲ ಮಂಟಪದ ರೀತಿ ಮುಖ ಮಂಟಪ ಸಿದ್ಧಪಡಿಸಲಾಗಿತ್ತು. ಹೀಗಾಗಿ ಬಂದವರನ್ನು ಕಲ್ಯಾಣ ಮಂಟಪ ಆಕರ್ಷಿಸುತ್ತಿತ್ತು.
ತರುಣ್ ಹಾಗೂ ಸೋನಲ್ ಇಬ್ಬರೂ ಚಿತ್ರರಂಗದವರಾಗಿದ್ದು, ಕಳೆದ ಕೆಲವು ದಿನಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ತಮ್ಮ ಪ್ರೀತಿಗೆ ಮದುವೆ ಮುದ್ರೆ ಹಾಕಲು ಮುಂದಾಗಿದ್ದರು. ಅದರಂತೆ ಇಂದು ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಕೆಂಗೇರಿ ಹತ್ತಿರ ಇರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಇಬ್ಬರ ವಿವಾಹ ಅದ್ದೂರಿಯಾಗಿ ಜರುಗಿದೆ.
ನಿನ್ನೆ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಕಾರ್ಯಕ್ರಮಕ್ಕೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.
