ಚೆನ್ನೈ: ಹಿಂದಿ ಹೇರಿಕೆಯ ವಿರುದ್ಧ ಹಿಂದಿನಿಂದಲೂ ಕೆಂಡ ಕಾರುತ್ತಾ ಬಂದಿರುವ ತಮಿಳುನಾಡು ಸರ್ಕಾರ ಇದೀಗ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಅದರಂತೆ, ಹಿಂದಿ ಹೋರ್ಡಿಂಗ್‌ಗಳು, ಫಲಕಗಳು, ಸಿನಿಮಾಗಳು ಮತ್ತು ಹಾಡುಗಳನ್ನು ರಾಜ್ಯದೆಲ್ಲೆಡೆ ನಿಷೇಧಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಸೂದೆ ಸಂವಿಧಾನಕ್ಕೆ ಅನುಗುಣವಾಗಿರುವಂತೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಸೂದೆ ಏನು ಹೇಳುತ್ತದೆ?
- ಹಿಂದಿ ಹೋರ್ಡಿಂಗ್‌ಗಳು ಮತ್ತು ವಾಣಿಜ್ಯ ಫಲಕಗಳಿಗೆ ರಾಜ್ಯವ್ಯಾಪಿ ನಿಷೇಧ.
- ಹಿಂದಿ ಭಾಷೆಯ ಸಿನಿಮಾಗಳು ಮತ್ತು ಹಾಡುಗಳ ಸಾರ್ವಜನಿಕ ಪ್ರಸಾರ/ಪ್ರದರ್ಶನಗಳಿಗೆ ನಿರ್ಬಂಧ.
- “ಹಿಂದಿ ಹೇರಿಕೆ” ತಪ್ಪಿಸಲು ಕ್ರಮಗಳು, ಆದರೆ ಸಂವಿಧಾನಬದ್ಧ ಮಿತಿ-ವ್ಯಾಪ್ತಿಯಲ್ಲೇ ನಿಯಂತ್ರಣ.
ಈ ಮಸೂದೆ ಮಂಡನೆಗೂ ಮುನ್ನ ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆಸಲಾಗಿದೆ ಎಂದು ಹೇಳಿದುಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕ ಟಿ.ಕೆ.ಎಸ್. ಎಳಂಗೋವನ್: “ನಾವು ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕೆಲಸ ಮಾಡುತ್ತಿಲ್ಲ. ಹಿಂದಿ ಹೇರಿಕೆಗೆ ಮಾತ್ರ ನಮ್ಮ ವಿರೋಧ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನಾಯಕ ವಿನೋಜ್ ಸೆಲ್ವಂ ಪ್ರತಿಕ್ರಿಯಿಸಿ, “ಇದೊಂದು ಅಸಮಂಜಸ ಮತ್ತು ಮೂರ್ಖತನದ ಕ್ರಮವಾಗಿದೆ. ಭಾಷೆಯನ್ನು ಯಾವತ್ತೂ ರಾಜಕೀಯ ಸಾಧನವಾಗಿ ಬಳಸಬಾರದು”, ಎಂದು ಟೀಕಿಸಿದ್ದಾರೆ. ಅಲ್ಲದೆ, ಇದು ತಿರುಪರಾಂಕುಂಡ್ರಮ್, ಕರೂರ್ ಕಾಲ್ತುಳಿತ ತನಿಖೆ, ಆರ್ಮ್‌ಸ್ಟ್ರಾಂಗ್ ವಿಚಾರಗಳಲ್ಲಿ ಸರ್ಕಾರಕ್ಕೆ ನ್ಯಾಯಾಲಯದಿಂದ ಆಗರುವ ಹಿನ್ನಡೆಯಿಂದ ಮತ್ತು ಫಾಕ್ಸ್‌ಕಾನ್ ಹೂಡಿಕೆ ವಿವಾದದಿಂದ ಜನರ ಗಮನ ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದೂ ಆರೋಪಿಸಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳಲ್ಲಿ 2025–26 ರಾಜ್ಯ ಬಜೆಟ್ ಲೋಗೋದಲ್ಲಿನ ರಾಷ್ಟ್ರೀಯ ರೂಪಾಯಿ ಚಿಹ್ನೆಯ ಬದಲಿಗೆ ತಮಿಳು ಅಕ್ಷರ ಬಳಸುವ ಮೂಲಕ ಡಿಎಂಕೆ ಸರ್ಕಾರ ವಿವಾದಕ್ಕೆ ಗುರಿಯಾಗಿತ್ತು. ಇದಕ್ಕೆ ಬಿಜೆಪಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ “ತಮಿಳು ಪ್ರೋತ್ಸಾಹ ಎನ್ನುವುದು, ರಾಷ್ಟ್ರೀಯ ಚಿಹ್ನೆಯ ನಿರಾಕರಣೆ ಆಗಬಾರದು” ಎಂದು ಸ್ಪಷ್ಟಪಡಿಸಿತ್ತು.
ಮುಂದೇನು?
ಮಸೂದೆ ಇಂದು ಮಂಡನೆಯಾಗುವ ಸಾಧ್ಯತೆಯಿದ್ದು, ಚರ್ಚೆಗೆ ತಂದ ನಂತರ ಸಮಿತಿಗೆ ಕಳಿಸುವ ಅಥವಾ ಮತದಾನಕ್ಕೆ ಇಡುವ ಸಾಧ್ಯತೆಯಿದೆ.