ತಮಿಳುನಾಡು ಸರ್ಕಾರ ತನ್ನ 2025-26ರ ರಾಜ್ಯ ಬಜೆಟ್ ದಾಖಲೆಗಳಲ್ಲಿ ಅಧಿಕೃತ ಭಾರತೀಯ ರೂಪಾಯಿ ಚಿಹ್ನೆ (₹) ಬದಲಿಗೆ ತಮಿಳು ಲಿಪಿಯ “ரூ” (ರೂ.) ಅನ್ನು ಬಳಸಿರುವುದು ಹೊಸ ಭಾಷಾ ವಿವಾದಕ್ಕೆ ಕಾರಣವಾಗಿದೆ.
ಶುಕ್ರವಾರ (ಮಾರ್ಚ್ 15) ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವ ತಂಗಮ್ ತೆಣ್ಣಾರಸು ಅವರು ಹೊಸ ಲೋಗೋವನ್ನು ಅನಾವರಣಗೊಳಿಸಿದರು. ಈ ಬೆಳವಣಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಪ್ರಕಾರ, ಈ ನಿರ್ಧಾರ ತಮಿಳು ಭಾಷಾ ಮತ್ತು ಸಾಂಸ್ಕೃತಿಕ ಹೆಮ್ಮೆ ತೋರುವ ಪ್ರಮುಖ ಹೆಜ್ಜೆಯಾಗಿದೆ. “ரூ” ಚಿಹ್ನೆ “ரூபாய்” (ರೂಪಾಯಿ) ಎಂಬ ತಮಿಳು ಪದದಿಂದ ಆವಿಷ್ಕೃತವಾಗಿದ್ದು, ಬಜೆಟ್ ಲೋಗೋದಲ್ಲಿ “ಎಲ್ಲರಿಗೂ ಎಲ್ಲವೂ” (எல்லார்க்கும் எல்லாம்) ಎಂಬ ವಾಕ್ಯವನ್ನು ಸೇರಿಸಲಾಗಿದೆ. ಈ ನಿರ್ಧಾರವನ್ನು ಸಮಾವೇಶಿತ (inclusive) ಆಡಳಿತ ಮಾದರಿಯ ಪ್ರತೀಕವಾಗಿ ಡಿಎಂಕೆ ಸರ್ಕಾರ ಬಿಂಬಿಸಿದೆ.
NEPಗೆ ತಮಿಳುನಾಡಿನ ವಿರೋಧ
ತಮಿಳುನಾಡು ಸರ್ಕಾರವು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರಲ್ಲಿ ಪ್ರಸ್ತಾಪಿಸಲಾದ ತ್ರಿ ಭಾಷಾ ಸೂತ್ರದ ವಿರುದ್ಧ ಹೋರಾಟ ನಡೆಸುತ್ತಿದೆ. ರಾಜ್ಯ ಸರ್ಕಾರದ ಪ್ರಕಾರ, ಈ ನೀತಿಯು ಹಿಂದಿಯ ಹೇರಿಕೆಯ ಒಂದು ಪ್ರಯತ್ನ ಎಂದು ಆರೋಪಿಸಲಾಗಿದೆ. ಹೆಚ್ಚಿನ ಕುತೂಹಲಕ್ಕೆ ಕಾರಣವಾದ ಸಂಗತಿಯೆಂದರೆ, ರೂಪಾಯಿ ಚಿಹ್ನೆ (₹) ವಿನ್ಯಾಸಗೊಳಿಸಿದ ಉದ್ಯ ಕುಮಾರ್ ಧರ್ಮಲಿಂಗಂ ತಮಿಳುನಾಡಿನವರೇ ಆಗಿದ್ದು, 2010ರಲ್ಲಿ ಈ ಚಿಹ್ನೆ ದೇಶವ್ಯಾಪಿಯಾಗಿ ಅಂಗೀಕಾರಗೊಂಡಿತ್ತು.
ತಮಿಳುನಾಡಿನ ಹೆಮ್ಮೆ
ಡಿಎಂಕೆ ವಕ್ತಾರ ಕಾನ್ಸ್ಟೆಂಟೈನ್ ರವೀಂದ್ರನ್ ಈ ಕುರಿತು ಮಾತನಾಡಿ, “ಈ ತೀರ್ಮಾನವನ್ನು ಮುಖ್ಯಮಂತ್ರಿಯೊಬ್ಬರೇ ತೆಗೆದುಕೊಂಡಿಲ್ಲ. ಇದು 8 ಕೋಟಿ ತಮಿಳು ಜನರ ಒಕ್ಕಣೆ. ನಮ್ಮ ತಾಯ್ನುಡಿಯ ಮೇಲೆ ಯಾವುದೇ ಸವಾಲು ಬಂದರೂ, ನಾವು ಅದನ್ನು ಸಮರ್ಥವಾಗಿ ಎದುರಿಸುತ್ತೇವೆ. ಇದು ರಾಜಕೀಯ ನಿರ್ಧಾರವೇ ಆಗಿರಬಹುದು, ಆದರೆ ನಮ್ಮ ದೃಷ್ಟಿಯಲ್ಲಿ ಇದು ಭಾಷಾ ಹೆಮ್ಮೆ ಮತ್ತು ಅಸ್ತಿತ್ವದ ಸಂಕೇತ. ಅಧಿಕೃತ ವರದಿಗಳಲ್ಲಿ ರೂಪಾಯಿ ಚಿಹ್ನೆ ಮುಂದುವರೆಯಲಿದೆ, ಆದರೆ ಲೋಗೋದಲ್ಲಿ “ரூ” ಬಳಸಿರುವುದು ನಮಗೆ ಹೆಮ್ಮೆ” ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಜೆಟ್ ಲೋಗೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, “எல்லார்க்கும் எல்லாம்” (ಎಲ್ಲರಿಗೂ ಎಲ್ಲವೂ) ಎಂಬ ತಮಿಳು ವಾಕ್ಯವನ್ನು ಬಳಸಿದ್ದಾರೆ. ಇದು ತಮಿಳುನಾಡು ಸರ್ಕಾರದ ಸಮಾವೇಶಿತ ಅಭಿವೃದ್ಧಿಯ ಬದ್ಧತೆಯನ್ನು ತೋರುತ್ತದೆ. ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಮಾತನಾಡಿ, “ಇದು ಯಾವುದೇ ಕಾನೂನುಬಾಹಿರ ನಿರ್ಧಾರವಲ್ಲ, ಇದು ಕೇಂದ್ರ ಸರ್ಕಾರದ ವಿರುದ್ಧ ಸಮರವೂ ಅಲ್ಲ. ನಮ್ಮ ಸರ್ಕಾರ ತಮಿಳು ಭಾಷೆಗೆ ಪ್ರಾಮುಖ್ಯತೆ ನೀಡುತ್ತದೆ” ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ಟೀಕೆ
ಈ ಹೊಸ ಬದಲಾವಣೆಯನ್ನು ಪ್ರತಿಪಕ್ಷಗಳು ತೀವ್ರ ಟೀಕಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, “₹ ಚಿಹ್ನೆಯನ್ನು ವಿನ್ಯಾಸಗೊಳಿಸಿದ ಉದ್ಯ ಕುಮಾರ್ ಮಾಜಿ ಡಿಎಂಕೆ ಶಾಸಕನ ಪುತ್ರ. ಅವರೇ ರೂಪಿಸಿದ ಚಿಹ್ನೆಯನ್ನು ಡಿಎಂಕೆ ಸರ್ಕಾರ ನಿರಾಕರಿಸುತ್ತಿದೆ. ಎಂ.ಕೆ. ಸ್ಟಾಲಿನ್ ಅವರಿಗಿಂತ ದೊಡ್ಡ ಮೂರ್ಖ ಯಾರಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಈ ನಿರ್ಧಾರ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಭಾಷಾ ಮತ್ತು ಸಂಸ್ಕೃತಿ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿರುವುದು ಸ್ಪಷ್ಟವಾಗಿದೆ.



















