ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವಿನ ಮೈತ್ರಿ ಮಾತುಕತೆ ಬಹುತೇಕ ಮುರಿದುಬಿದ್ದಿದೆ ಎನ್ನಲಾಗಿದೆ. ಟಿವಿಕೆ ನಾಯಕರೊಬ್ಬರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಎಐಎಡಿಎಂಕೆ ಹಾಗೂ ಬಿಜೆಪಿ ನಾಯಕರು ಟಿವಿಕೆ ವಿರುದ್ಧ ಬಹಿರಂಗ ವಾಗ್ದಾಳಿಗೆ ಇಳಿದಿದ್ದಾರೆ. ಆದರೆ, ಈ ಬೆಳವಣಿಗೆಗಳ ಬಗ್ಗೆ ಆಡಳಿತಾರೂಢ ಡಿಎಂಕೆ ಆಗಲಿ ಅಥವಾ ರಜನಿಕಾಂತ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೈತ್ರಿ ಮಾತುಕತೆಗೆ ತಣ್ಣೀರೆರಚಿದ ಹೇಳಿಕೆ
ಕಳೆದ ಕೆಲವು ವಾರಗಳಿಂದ ಟಿವಿಕೆ ಮತ್ತು ಬಿಜೆಪಿ ನಡುವೆ ತೆರೆಮರೆಯ ಮೈತ್ರಿ ಮಾತುಕತೆಗಳು ಬಿರುಸಿನಿಂದ ಸಾಗಿದ್ದವು. ಆದರೆ, ಟಿವಿಕೆ ಪ್ರಧಾನ ಕಾರ್ಯದರ್ಶಿ ಆದವ್ ಅರ್ಜುನ ಅವರು ರಜನಿಕಾಂತ್ ಕುರಿತು ನೀಡಿದ ಹೇಳಿಕೆ ಈ ಎಲ್ಲ ಬೆಳವಣಿಗೆಗಳಿಗೆ ಅಡ್ಡಿಯಾಗಿ ನಿಂತಿದೆ. ಡಿಎಂಕೆ ವರಿಷ್ಠರ ಬೆದರಿಕೆಗೆ ಹೆದರಿಯೇ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿದರು ಎಂದು ಆದವ್ ಆರೋಪಿಸಿದ್ದರು. ನಟ ವಿಜಯ್ ಅವರ “ಮಾನಸಿಕ ಸ್ಥೈರ್ಯ”ವನ್ನು ಎತ್ತಿತೋರಿಸುವ ಭರದಲ್ಲಿ ಅವರು ನೀಡಿದ್ದ ಈ ಹೇಳಿಕೆ ಇದೀಗ ಭಾರಿ ಜನಾಕ್ರೋಶಕ್ಕೆ ಗುರಿಯಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಎನ್‌ಡಿಎ ಮೈತ್ರಿಕೂಟದ ನಾಯಕರು ವಿಜಯ್ ಪಕ್ಷದೊಂದಿಗಿನ ಮೈತ್ರಿ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಜನಿ ಬೆನ್ನಿಗೆ ನಿಂತ ಎಐಎಡಿಎಂಕೆ, ಬಿಜೆಪಿ
ಈ ವಿವಾದದ ನಡುವೆ ರಜನಿಕಾಂತ್ ಅವರ ಅಪಾರ ಅಭಿಮಾನಿ ಬಳಗವನ್ನು ಸೆಳೆಯುವ ಉದ್ದೇಶದಿಂದಲೋ ಎಂಬಂತೆ ಎಐಎಡಿಎಂಕೆ ಮತ್ತು ಬಿಜೆಪಿ ನಾಯಕರು ಸೂಪರ್‌ಸ್ಟಾರ್ ಬೆಂಬಲಕ್ಕೆ ನಿಂತಿದ್ದಾರೆ. ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಟಿವಿಕೆ ನಾಯಕನ ಹೇಳಿಕೆಯನ್ನು ‘ರಾಜಕೀಯ ಅಸಭ್ಯತೆ’ ಎಂದು ಜರಿದಿದ್ದಾರೆ. ರಜನಿಕಾಂತ್ ಅವರು ರಾಜಕೀಯವನ್ನು ಮೀರಿದ ಗೌರವಾನ್ವಿತ ವ್ಯಕ್ತಿ, ಅವರ ಘನತೆಗೆ ಚ್ಯುತಿ ತರುವಂತೆ ಮಾತನಾಡುವುದು ಒಪ್ಪತಕ್ಕದ್ದಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕೂಡ ಆದವ್ ಅವರ ಹೇಳಿಕೆಯನ್ನು ಕೇವಲ “ಭ್ರಮೆ” ಎಂದು ತಳ್ಳಿಹಾಕಿದ್ದು, 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವುದೇ ರಜನಿಕಾಂತ್ ಅವರ ಅಸಾಧಾರಣ ಮಾನಸಿಕ ಸ್ಥೈರ್ಯಕ್ಕೆ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಪಟ್ಟದ ಬೇಡಿಕೆ
ಆಡಳಿತಾರೂಢ ಡಿಎಂಕೆ ವಿರುದ್ಧ ಪ್ರಬಲ ಮೈತ್ರಿಕೂಟ ರಚಿಸುವ ನಿಟ್ಟಿನಲ್ಲಿ ಬಿಜೆಪಿ, ವಿಜಯ್ ಪಕ್ಷಕ್ಕೆ 80 ಸ್ಥಾನಗಳು ಹಾಗೂ ಉಪಮುಖ್ಯಮಂತ್ರಿ ಪಟ್ಟದ ಆಫರ್ ನೀಡಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಯಾಗಿ ವಿಜಯ್ ಅವರು ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಹಾಜರಾಗಲು ವಿಜಯ್ ದೆಹಲಿಗೆ ತೆರಳಿದ್ದಾಗ ಈ ಮೈತ್ರಿ ವದಂತಿಗಳು ತಾರಕಕ್ಕೇರಿದ್ದವು.
ಆದರೆ ಈಗಿನ ಬೆಳವಣಿಗೆಗಳ ಪ್ರಕಾರ, ತಮಿಳುನಾಡು ಚುನಾವಣಾ ಕಣವು ಚತುಷ್ಕೋನ ಸ್ಪರ್ಧೆಯತ್ತ ವಾಲುತ್ತಿದೆ. ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಲು ಡಿಎಂಕೆ ಯತ್ನಿಸುತ್ತಿದ್ದರೆ, ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಎಐಎಡಿಎಂಕೆ ಮರಳಿ ಅಧಿಕಾರ ಹಿಡಿಯುವ ತವಕದಲ್ಲಿದೆ. ಮತ್ತೊಂದೆಡೆ, ಸಿ.ಎನ್. ಅಣ್ಣಾದೊರೈ ಹಾಗೂ ಎಂ.ಜಿ.ಆರ್ ಅವರಂತೆ ಚಿತ್ರರಂಗದಿಂದ ಬಂದು ರಾಜಕೀಯದಲ್ಲಿ ನೆಲೆದೂರಲು ಬಯಸುತ್ತಿರುವ ವಿಜಯ್ ಅವರ ಟಿವಿಕೆ ಹಾಗೂ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಸೀಮನ್ ಅವರ ‘ನಾಮ್ ತಮಿಳರ್ ಕಚ್ಚಿ’ (NTK) ಕೂಡ ಕಣದಲ್ಲಿ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿವೆ.
ಇದನ್ನೂ ಓದಿ : ಹುಡುಗಿಗಾಗಿ ಕಲ್ಲಿನಿಂದ ಜಜ್ಜಿ ಸ್ವಂತ ತಮ್ಮನನ್ನೇ ಕೊಂದ ಪಾಪಿ ಅಣ್ಣ


















