ಚೆನ್ನೈ: ತಮಿಳುನಾಡಿನಲ್ಲಿ ಸಂಭವಿಸಿದ ಲಾಕಪ್ ಡೆತ್ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವಂತೆಯೇ, ಮೃತಪಟ್ಟ ದೇವಸ್ಥಾನದ ಕಾವಲುಗಾರ ಅಜಿತ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ವರದಿಯು ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದೆ. ಅಜಿತ್ ಕುಮಾರ್ ದೇಹದ ಮೇಲೆ ಒಟ್ಟು 44 ಗಾಯಗಳು ಕಂಡುಬಂದಿದ್ದು, ಇವುಗಳಲ್ಲಿ ಆಳವಾದ ಸ್ನಾಯುಗಳ ಗಾಯಗಳು, ಮೆದುಳಿನ ರಕ್ತಸ್ರಾವ ಮತ್ತು ಆಂತರಿಕ ಅಂಗಗಳಿಗೆ ಆದ ಗಾಯಗಳು ಸೇರಿವೆ. ಇವುಗಳು ಅವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಬಲಪಡಿಸಿದೆ.
ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ, ಅಜಿತ್ ಕುಮಾರ್ ದೇಹದಲ್ಲಿ ವ್ಯಾಪಕವಾದ ಆಂತರಿಕ ರಕ್ತಸ್ರಾವ ಮತ್ತು ಗಾಯಗಳಾಗಿವೆ. ಅವರಿಗೆ ದೀರ್ಘಕಾಲದವರೆಗೆ ತೀವ್ರ ಹಿಂಸೆ ನೀಡಲಾಗಿದ್ದು, ಅದು ಸಾವಿಗೆ ಕಾರಣವಾಗಿದೆ ಎಂಬುದಕ್ಕೆ ಪ್ರಬಲ ವೈದ್ಯಕೀಯ ಪುರಾವೆಗಳನ್ನು ಇದು ಒದಗಿಸಿವೆ.
ಹೃದಯ ಮತ್ತು ಯಕೃತ್ತಿನಂತಹ ಅಂಗಗಳಲ್ಲಿ ಕಂಡುಬಂದ ಪೆಟೆಚಿಯಲ್ ಹೆಮರೇಜ್‌ಗಳು (ಸಣ್ಣ ಆಂತರಿಕ ರಕ್ತಸ್ರಾವದ ಗುರುತುಗಳು) ಮತ್ತು ತಲೆಯ ಹೊರ ಪದರದಲ್ಲಿ ಮೂಗೇಟುಗಳು, ಅಂದರೆ ಬ್ಲಂಟ್ ಫೋರ್ಸ್ ಟ್ರಾಮಾ ಮತ್ತು ಆಂತರಿಕ ರಕ್ತಸ್ರಾವವನ್ನು ಸೂಚಿಸುತ್ತವೆ. ಇಂತಹ ಗಾಯಗಳು ಸಾಮಾನ್ಯವಾಗಿ ಆಕಸ್ಮಿಕ ಅಥವಾ ಒಂದೆರಡು ಹೊಡೆತಗಳಿಂದ ಉಂಟಾಗುವುದಿಲ್ಲ, ಬದಲಿಗೆ ದೀರ್ಘಕಾಲದ, ಉದ್ದೇಶಪೂರ್ವಕ ದೈಹಿಕ ದೌರ್ಜನ್ಯದಿಂದ ಉಂಟಾಗುತ್ತವೆ ಎಂದು ವರದಿ ಸ್ಪಷ್ಟಪಡಿಸಿದೆ.
ವರದಿಯ ಪ್ರಕಾರ, ಅಜಿತ್ ಕುಮಾರ್ ದೇಹದ ಮೇಲೆ ದಾಖಲಾದ 44 ಗಾಯಗಳು, ಆಳವಾದ ಸ್ನಾಯು ಮಟ್ಟದ ಮೂಗೇಟುಗಳು, ಮೆದುಳು ಮತ್ತು ಅಂಗಗಳಲ್ಲಿ ರಕ್ತಸ್ರಾವ ಸೇರಿದಂತೆ ದೇಹದೆಲ್ಲೆಡೆ ಉಂಟಾದ ಗಾಯಗಳನ್ನು ನೋಡಿದರೆ, ಕೋಲು, ಲಾಠಿ ಅಥವಾ ರಾಡ್‌ಗಳಂತಹ ವಸ್ತುಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಿರಂತರ ದೈಹಿಕ ಹಲ್ಲೆ ನಡೆಸಿರುವುದು ಸ್ಪಷ್ಟವಾಗುತ್ತಿದೆ.
ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿರುವಂತೆ ಇದು ನೈಸರ್ಗಿಕ ಸಾವು, ಸಣ್ಣ ಜಗಳ ಅಥವಾ ಫಿಟ್ಸ್‌ನಿಂದ ಉಂಟಾದ ಸಾವು ಎಂಬ ಯಾವುದೇ ಹೇಳಿಕೆಗಳನ್ನು ಮರಣೋತ್ತರ ವರದಿಯ ಸಂಯೋಜಿತ ಆವಿಷ್ಕಾರಗಳು ಸಂಪೂರ್ಣವಾಗಿ ನಿರಾಕರಿಸುತ್ತವೆ.
ಮೆದುಳಿಗೆ ವ್ಯಾಪಕ ಹಾನಿಯೇ ಸಾವಿಗೆ ಪ್ರಮುಖ ಕಾರಣ
ಅಜಿತ್ ಕುಮಾರ್ ಅವರ ದೇಹದಲ್ಲಿ ವ್ಯಾಪಕ ಮೆದುಳಿನ ಆಘಾತ ಕಂಡುಬಂದಿದೆ. ತಲೆಯ ಹೊರಪದರದಲ್ಲಿ ಮೂಗೇಟುಗಳು (subscalp contusions), ತಲೆಬುರುಡೆಯ ಎಕಿಮೋಸಿಸ್ (Ecchymosis) ಮತ್ತು ಎರಡೂ ಸೆರೆಬ್ರಲ್ ಲೋಬ್‌ಗಳಲ್ಲಿ ರಕ್ತಸ್ರಾವ (Haemorrhaging) ಇರುವುದು ವರದಿಯಲ್ಲಿದೆ. ಹೀಗಾಗಿ ಅಜಿತ್ ಕುಮಾರ್ ತಲೆಗೆ ಭಾರಿ ಹೊಡೆತ ಅಥವಾ ನಿರಂತರ ಹಲ್ಲೆಯಿಂದ, ತಲೆಬುರುಡೆಯ ಮೇಲೆ ಮೂಗೇಟು ಮಾತ್ರವಲ್ಲದೆ ಮೆದುಳಿನಲ್ಲಿ ಅಪಾಯಕಾರಿ ಆಂತರಿಕ ರಕ್ತಸ್ರಾವ ಉಂಟಾಗಿದೆ. ಇದು ಸಾವಿಗೆ ಪ್ರಮುಖ ಕಾರಣವಾಗಿರುವ ಸಾಧ್ಯತೆಯಿದೆ.