ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವಂತೆಯೇ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ನಟ, ರಾಜಕಾರಣಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ, ವಿಜಯ್‌ಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನದ ಜೊತೆಗೆ 80 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಂಪರ್ ಆಫರ್ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಹುದ್ದೆಯತ್ತ ವಿಜಯ್ ಚಿತ್ತ
ಎನ್‌ಡಿಎಯನ್ನು ತಮಿಳುನಾಡಿನಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಟಿವಿಕೆ ನಡುವಿನ ಮೈತ್ರಿ ಮಾತುಕತೆಗಳು ಅಂತಿಮ ಹಂತ ತಲುಪಿವೆ. ಈ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವಿಜಯ್ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಲು ಹಾಗೂ 80 ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಒಲವು ತೋರಿದೆ. ಆದರೆ, ವಿಜಯ್ ಅವರು ಮೊದಲಿನಿಂದಲೂ ಮುಖ್ಯಮಂತ್ರಿ ಹುದ್ದೆಯ ಮೇಲೆಯೇ ಕಣ್ಣಿಟ್ಟಿದ್ದು, ಇದು ಪ್ರಸ್ತುತ ಮಾತುಕತೆಯ ಪ್ರಮುಖ ಚರ್ಚಾ ವಿಷಯವಾಗಿ ಉಳಿದಿದೆ ಎಂದು ತಿಳಿದುಬಂದಿದೆ.
ಸಂಧಾನಕ್ಕೆ ಅನ್ಯ ರಾಜ್ಯದ ನಾಯಕರ ಸಾಥ್
ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಅಲ್ಪಾವಧಿಯಲ್ಲೇ ವಿಜಯ್ ಅವರ ಪಕ್ಷ ತಮಿಳುನಾಡಿನಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಹೀಗಾಗಿ ವಿಜಯ್ ಅವರನ್ನು ಹೇಗಾದರೂ ಮಾಡಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳಿಸಲು ಬಿಜೆಪಿ ನಾಯಕರು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿ ದೆಹಲಿ ನಾಯಕರು ಹಲವು ಮಾರ್ಗಗಳನ್ನು ಬಳಸಿಕೊಳ್ಳುತ್ತಿದ್ದು, ಅನ್ಯ ರಾಜ್ಯವೊಂದರ ಉಪಮುಖ್ಯಮಂತ್ರಿಯೊಬ್ಬರು ಈ ಮೈತ್ರಿ ಮಾತುಕತೆಯಲ್ಲಿ ಪ್ರಮುಖ ಸಂಧಾನಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಜಯ್ ಅಭಿಮಾನಿಗಳ ‘ಮತ’ಬ್ಯಾಂಕ್ ಮೇಲೆ ಕಮಲ ಕಣ್ಣು
ತಮಿಳುನಾಡಿನಾದ್ಯಂತ ನಟ ವಿಜಯ್ ಹೊಂದಿರುವ ಬೃಹತ್ ಅಭಿಮಾನಿ ಬಳಗವೇ ಬಿಜೆಪಿಯ ಈ ರಣತಂತ್ರಕ್ಕೆ ಪ್ರಮುಖ ಕಾರಣ. ತಮಿಳುನಾಡು ಚುನಾವಣಾ ಇತಿಹಾಸವನ್ನು ಗಮನಿಸಿದರೆ, ಅಲ್ಲಿನ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆಯಿರುತ್ತದೆ. ಇಂತಹ ತೀವ್ರ ಪೈಪೋಟಿಯ ಕ್ಷೇತ್ರಗಳಲ್ಲಿ ಕೇವಲ ಶೇ.2ರಷ್ಟು ಮತಗಳ ಏರುಪೇರು ಕೂಡ ಸಂಪೂರ್ಣ ಗೆಲುವಿನ ದಿಕ್ಕನ್ನೇ ಬದಲಾಯಿಸಬಲ್ಲದು ಎಂಬುದು ಬಿಜೆಪಿ ವ್ಯೂಹ ರಚನೆಗಾರರ ಲೆಕ್ಕಾಚಾರವಾಗಿದೆ. ಒಂದು ವೇಳೆ ಈ ಮೈತ್ರಿ ಯಶಸ್ವಿಯಾದರೆ, ರಾಜ್ಯದ ಚುನಾವಣಾ ಲೆಕ್ಕಾಚಾರಗಳೇ ಬದಲಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಕೊಪ್ಪಳದ ಫ್ಯಾನ್ಸಿ ಸ್ಟೋರಿನಲ್ಲಿ ನಶೆ ಬರುವ ಮಾತ್ರೆ ಮಾರಾಟ – ಮಾಲೀಕ ಅರೆಸ್ಟ್



















