ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ ಜಂಟಿ ಸದನಗಳನ್ನು ಉದ್ಧೇಶಿಸಿ ಗುರುವಾರ ಭಾಷಣ ಮಾಡಿ, ಎಮರ್ಜೆನ್ಸಿ ಕಿಚ್ಚಿಗೆ ಕಾರಣವಾಗಿದ್ದಾರೆ.
ತುರ್ತು ಪರಿಸ್ಥಿತಿ ವಿಚಾರದಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಐಎನ್‌ಡಿಐಎ ಬ್ಲಾಕ್ ನಡುವಿನ ಸಂಘರ್ಷದ ಬೆಂಕಿಗೆ ರಾಷ್ಟ್ರಪತಿಯ ಭಾಷಣ ತುಪ್ಪ ಸುರಿದಂತಾಗಿದೆ. 18ನೇ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಭಾಷಣ ಮಾಡಿದ ರಾಷ್ಟ್ರಪತಿ, 1975ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯು ನಮ್ಮ ಸಂವಿಧಾನದ ಮೇಲಿನ ನೇರ ದಾಳಿಯ ಕರಾಳ ಅಧ್ಯಾಯ ಎಂದು ಆರೋಪಿಸಿದ್ದಾರೆ.

ಈ ಹಿಂದಿನ ದಶಕಗಳಲ್ಲಿ ಸಂವಿಧಾನವು ಪ್ರತಿ ಸವಾಲು ಹಾಗೂ ಪ್ರತಿ ಪರೀಕ್ಷೆಗಳಲ್ಲಿಯೂ ಎದ್ದು ನಿಂತಿದೆ ಅಂತ ಕೂಡ ಅವರು ಬಣ್ಣಿಸಿದರು.
1975ರ ಜೂನ್ 25ರಂದು ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಇದು ಸಂವಿಧಾನದ ಮೇಲಿನ ನೇರ ದಾಳಿಯ ಕರಾಳ ಅಧ್ಯಾಯ. ಆಗ ಇಡೀ ದೇಶವೇ ಆಕ್ರೋಶಗೊಂಡಿತ್ತು. ಆದರೆ ಭಾರತದ ಅಂತರಾಳದಲ್ಲಿ ಗಣತಂತ್ರದ ಸಂಪ್ರದಾಯವು ಅಡಗಿರುವುದರಿಂದ ಅಂತಹ ಅಸಾಂವಿಧಾನಿಕ ಶಕ್ತಿಗಳ ವಿರುದ್ಧ ಭಾರತ ಗೆಲುವು ಪಡೆಯಿತು ಎಂದು ಮುರ್ಮು ಹೇಳಿದ್ದಾರೆ. ದ್ರೌಪದಿ ಅವರ ಈ ಭಾಷಣಕ್ಕೆ ಆಡಳಿತ ಪಕ್ಷದ ಸದಸ್ಯರ ಚಪ್ಪಾಳೆ ಸಿಕ್ಕರೆ, ವಿರೋಧ ಪಕ್ಷಗಳು ಪ್ರತಿಭಟಿಸುವಂತಾಯಿತು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಸಂವಿಧಾನ ಬದಲಾವಣೆ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇತ್ತು. ತುರ್ತು ಪರಿಸ್ಥಿತಿ ಹೇರಿಕೆಯಾಗಿ 49 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಸಂವಿಧಾನದ ಮೇಲೆ ಇಂದಿರಾ ಗಾಂಧಿ ಅವರು ಪ್ರಹಾರ ನಡೆಸಿದ್ದರು ಎಂಬ ಅಂಶವನ್ನು ಬಿಜೆಪಿ, ಪ್ರತಿಪಕ್ಷಗಳ ವಿರುದ್ಧ ಬಳಸಿಕೊಂಡಿದೆ. ಸಂಸತ್ ನಲ್ಲಿನ ಗದ್ದ ತೀವ್ರ ಮಾತಿನ ಚಕಮಕಿಗೂ ಇದು ಕಾರಣವಾಗಿದೆ.
ನನ್ನ ಸರ್ಕಾರವು ಭಾರತದ ಸಂವಿಧಾನವನ್ನು ಆಡಳಿತದ ಮಾಧ್ಯಮವನ್ನಾಗಿ ಮಾತ್ರ ನೋಡುತ್ತಿಲ್ಲ. ಎಮರ್ಜೆನ್ಸಿ ಸಂದರ್ಭದಲ್ಲಿ ದೇಶವು ಅರಾಜಕತೆಯಲ್ಲಿ ಮುಳುಗಿತ್ತು. ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಅಂತಹ ಪ್ರಯತ್ನಗಳನ್ನು ಪ್ರತಿಯೊಬ್ಬರೂ ಖಂಡಿಸಬೇಕು. ವಿಭಜನಾಶಕ್ತಿಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು, ದೇಶದ ಒಳಗಿನಿಂದ ಹಾಗೂ ಹೊರಗಿನಿಂದ ಸಮಾಜದಲ್ಲಿ ಕಂದರ ಸೃಷ್ಟಿಸಲು ಸಂಚು ನಡೆಸಿವೆ ಎಂದು ಮುರ್ಮು ಆರೋಪಿಸಿದರು. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.