ರಾವಲ್ಪಿಂಡಿ/ಇಸ್ಲಾಮಾಬಾದ್ : ಮಧ್ಯಪ್ರಾಚ್ಯದ ಯುದ್ಧದ ನಡುವೆಯೇ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದ್ದು, ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿದೆ. ಸೋಮವಾರ ಬೆಳಿಗ್ಗೆ ಅಫ್ಘಾನ್ ತಾಲಿಬಾನ್ ಪಡೆಗಳು ಪಾಕಿಸ್ತಾನದ ಆಯಕಟ್ಟಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅತ್ಯಾಧುನಿಕ ಡ್ರೋನ್ ದಾಳಿಗಳನ್ನು ನಡೆಸಿವೆ. ವಿಶೇಷವಾಗಿ ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ‘ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್’ ಎಂದೇ ಕರೆಯಲ್ಪಡುವ ನೂರ್ ಖಾನ್ ವಾಯುನೆಲೆ ಮೇಲೆ ತಾಲಿಬಾನ್ ಬಾಂಬ್ ಮಳೆಗರೆದಿದೆ. ಈ ದಾಳಿಯು ಪಾಕಿಸ್ತಾನದ ರಕ್ಷಣಾ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ನೂರ್ ಖಾನ್ ಬೇಸ್ ಮೇಲೆ ಸರಣಿ ಪ್ರಹಾರ
ರಾವಲ್ಪಿಂಡಿಯ ನೂರ್ ಖಾನ್ ಏರ್ ಬೇಸ್ ಮೇಲೆ ನಡೆದ ಈ ದಾಳಿಯು ಪಾಕಿಸ್ತಾನಕ್ಕೆ ಭಾರಿ ಆಘಾತ ತಂದಿದೆ. ಗಮನಾರ್ಹ ಸಂಗತಿಯೆಂದರೆ, 2025ರ ಮೇ ತಿಂಗಳಲ್ಲಿ ಭಾರತವು ನಡೆಸಿದ್ದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ವೇಳೆ ಇದೇ ವಾಯುನೆಲೆಯ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಿದ್ದವು. ಆ ದಾಳಿಯಿಂದ ಉಂಟಾಗಿದ್ದ ಹಾನಿಯನ್ನು ಸರಿಪಡಿಸಲು ಕಳೆದ 9 ತಿಂಗಳಿನಿಂದ ಅಲ್ಲಿ ಪುನರ್ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈಗ ತಾಲಿಬಾನ್ ನಡೆಸಿರುವ ಹೊಸ ದಾಳಿಯಿಂದಾಗಿ ನಡೆಯುತ್ತಿದ್ದ ದುರಸ್ತಿ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದ್ದು, ವಾಯುನೆಲೆಗೆ ಮತ್ತಷ್ಟು ಹಾನಿ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಕ್ವೆಟ್ಟಾ, ಖೈಬರ್ ಪಖ್ತುನ್ಖ್ವಾದಲ್ಲೂ ತಾಲಿಬಾನ್ ಅಟ್ಟಹಾಸ
ಅಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ದಾಳಿಯ ದೃಶ್ಯಗಳನ್ನು ಹಂಚಿಕೊಂಡಿದ್ದು, ಕೇವಲ ರಾವಲ್ಪಿಂಡಿ ಮಾತ್ರವಲ್ಲದೆ, ಕ್ವೆಟ್ಟಾದಲ್ಲಿರುವ 12ನೇ ಡಿವಿಷನ್ ಪ್ರಧಾನ ಕಚೇರಿ ಮತ್ತು ಖೈಬರ್ ಪಖ್ತುನ್ಖ್ವಾದ ಮೊಹ್ಮಂಡ್ ಏಜೆನ್ಸಿಯಲ್ಲಿರುವ ಸೇನಾ ಶಿಬಿರಗಳ ಮೇಲೂ ನಿಖರವಾದ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಘೋಷಿಸಿದೆ. ಈ ದಾಳಿಗಳ ಸರಣಿಯು ಪಾಕಿಸ್ತಾನದ ಮಿಲಿಟರಿ ಶಕ್ತಿಯನ್ನು ಕುಂದಿಸುವ ತಾಲಿಬಾನ್ ತಂತ್ರದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಾಕ್ ಪೈಲಟ್ ಸೆರೆ
ಇದೇ ವೇಳೆ, ಜಲಾಲಾಬಾದ್ ನಗರದ ಸಮೀಪ ಪಾಕಿಸ್ತಾನದ ಯುದ್ಧ ವಿಮಾನವೊಂದನ್ನು ತಾಲಿಬಾನ್ ಹೊಡೆದುರುಳಿಸಿದೆ. ವಿಮಾನ ಪತನಗೊಳ್ಳುವ ಮುನ್ನ ಪ್ಯಾರಾಚೂಟ್ ಮೂಲಕ ಜಿಗಿದಿದ್ದ ಪಾಕ್ ಪೈಲಟ್‌ನನ್ನು ತಾಲಿಬಾನ್ ಪಡೆಗಳು ಜೀವಂತವಾಗಿ ಸೆರೆಹಿಡಿದಿವೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಕಳೆದ ಶುಕ್ರವಾರವಷ್ಟೇ ಪಾಕಿಸ್ತಾನವು ಕಾಬೂಲ್ ಮತ್ತು ಕಂದಹಾರ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ತಾಲಿಬಾನ್ ಈ ಕ್ರಮ ಕೈಗೊಂಡಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ತಮ್ಮ ದೇಶವು ಅಫ್ಘಾನಿಸ್ತಾನದೊಂದಿಗೆ “ನೇರ ಯುದ್ಧ”ದ ಸ್ಥಿತಿಯಲ್ಲಿದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಉಭಯ ದೇಶಗಳ ಗಡಿಯಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಸೈನಿಕರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಖಮೇನಿ ಹತ್ಯೆ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು | ಯತ್ನಾಳ್ ಕಿಡಿ



















