ಕಾಬೂಲ್: ದಿಢೀರ್ ನಿರ್ಧಾರವೆಂಬಂತೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ತನ್ನ ದೇಶದಲ್ಲಿ ಚೆಸ್ ಆಟಕ್ಕೆ ನಿಷೇಧ ಹೇರಿದೆ. ಈ ಕ್ರೀಡೆಯು ಜೂಜಿಗೆ ಅನುವು ಮಾಡಿಕೊಡುತ್ತಿದೆ ಎಂಬ ಕಳವಳದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಚೆಸ್‌ಗೆ ನಿರ್ಬಂಧ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ. ಜೂಜಾಟವು ಇಸ್ಲಾಮಿಕ್ ಶರಿಯಾ ಕಾನೂನಿನಲ್ಲಿ ಅಕ್ರಮ ಎಂದು ಪರಿಗಣಿಸಲ್ಪಟ್ಟಿದೆ. ಚೆಸ್ ಕ್ರೀಡೆಯು ಜೂಜಿನೊಂದಿಗೆ ಸಂಬಂಧ ಹೊಂದಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಆಫ್ಘನ್ ಸರ್ಕಾರ ಹೇಳಿದೆ.
ಈ ನಿರ್ಧಾರವನ್ನು ಅಫ್ಘಾನಿಸ್ತಾನದಲ್ಲಿ ಎಲ್ಲಾ ಕ್ರೀಡಾ ವಿಚಾರಗಳನ್ನು ನಿಯಂತ್ರಿಸುವ ಕ್ರೀಡಾ ನಿರ್ದೇಶನಾಲಯವು ಕೈಗೊಂಡಿದೆ. ತಾಲಿಬಾನ್ ಸರ್ಕಾರವು ಶರಿಯಾ ಕಾನೂನನ್ನು ಅನುಸರಿಸುತ್ತದೆ. ಶರಿಯಾ ಪ್ರಕಾರ ಚೆಸ್ ಆಟವು ಜೂಜಿಗೆ ಸಮಾನ ಎಂದು ಕ್ರೀಡಾ ಇಲಾಖೆಯ ವಕ್ತಾರರಾದ ಅಟಲ್ ಮಶ್ವಾನಿ ಹೇಳಿದ್ದಾರೆ.
ಈ ನಿರ್ಧಾರದ ಹಿಂದೆ ಧಾರ್ಮಿಕ ಕಳಕಳಿಗಳು ಅಡಗಿವೆ. ಚೆಸ್ ಕ್ರೀಡೆಯ ವಿಚಾರದಲ್ಲಿ ಹಲವು ಧಾರ್ಮಿಕ ಪ್ರಶ್ನೆಗಳು ಉದ್ಘವಿಸಿರುವ ಕಾರಣ, ಆ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವವರೆಗೂ ಚೆಸ್ ಗೆ ಅಫ್ಘಾನಿಸ್ತಾನದಲ್ಲಿ ನಿಷೇಧ ಹೇರಲು ನಿರ್ಧರಿಸಿದ್ದೇವೆ ಎಂದು ಮಾಷ್ವಾನಿ ಹೇಳಿದ್ದಾರೆ.
ಇದು ಸ್ಥಳೀಯರ ಮೇಲೆ ಹೇಗೆ ಪರಿಣಾಮ ಬೀರಿದೆ?
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಕೆಫೆಯೊಂದನ್ನು ನಡೆಸುತ್ತಿರುವ ಅಜಿಜುಲ್ಲಾ ಗುಲ್ಜದಾ ಎಂಬವರು, ಇತ್ತೀಚಿನ ಕೆಲವು ವರ್ಷಗಳಿಂದ ಅನೌಪಚಾರಿಕ ಚೆಸ್ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದಾರೆ. ಆದರೆ, ಈ ಕ್ರೀಡೆಯ ವೇಳೆ ಯಾವುದೇ ಜೂಜಾಟಗಳು ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಇತರೆ ಇಸ್ಲಾಮಿಕ್ ದೇಶಗಳಲ್ಲೂ ಚೆಸ್ ಆಡಲಾಗುತ್ತದೆ. ಅದಕ್ಕೆ ಯಾರೂ ನಿಷೇಧ ಹೇರಿಲ್ಲ. ಅನೇಕ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಆಟಗಾರರೂ ಇದ್ದಾರೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ನಾನು ಸರ್ಕಾರದ ನಿರ್ಧಾರವನ್ನು ಗೌರವಿಸುತ್ತೇನೆ. ಆದರೆ ನನ್ನ ವ್ಯಾಪಾರ ಮತ್ತು ಆ ಕ್ರೀಡೆಯನ್ನು ಮನರಂಜನೆಯಾಗಿ ಅನುಭವಿಸುತ್ತಿದ್ದವರಿಗೆ ಸಮಸ್ಯೆಯಾಗಲಿದೆ ಎಂದೂ ಅವರು ಹೇಳಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಯುವ ಜನರಿಗೆ ಹೆಚ್ಚು ಚಟುವಟಿಕೆಗಳೇ ಇಲ್ಲ. ಆದ್ದರಿಂದ ಬಹಳಷ್ಟು ಜನ ಪ್ರತಿದಿನವೂ ಇಲ್ಲಿ ಬರುತ್ತಿದ್ದರು. ಚೆಸ್ ಆಟವನ್ನು ನೋಡಿ ಸಂಭ್ರಮಿಸುತ್ತಿದ್ದರು” ಎಂದಿದ್ದಾರೆ.
ಅಫ್ಘಾನಿಸ್ತಾನದ ಅಧಿಕಾರಿಗಳು ಕಳೆದ ಕೆಲವು ವರ್ಷಗಳಲ್ಲಿ ಇತರೆ ಅನೇಕ ಕ್ರೀಡೆಗಳಿಗೆ ನಿಷೇಧ ಹೇರಿದ್ದಾರೆ. ಅಲ್ಲದೇ ಮಹಿಳೆಯರಿಗಂತೂ ದೇಶದ ಕ್ರೀಡೆಗಳಲ್ಲಿ ಭಾಗವಹಿಸಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕಳೆದ ವರ್ಷ, ಅಧಿಕಾರಿಗಳು ವೃತ್ತಿಪರ ಸ್ಪರ್ಧೆಯಾದ ಮಿಶ್ರ ಮಾರ್ಷಲ್ ಆರ್ಟ್ಸ್ (ಎಂಎಂಎ)ಗೂ ನಿರ್ಬಂಧ ಹೇರಿದ್ದರು. ಈ ಕ್ರೀಡೆಯು ಹೆಚ್ಚು “ಹಿಂಸಾತ್ಮಕ” ಮತ್ತು “ಶರಿಯಾ ಸಂಬಂಧವಾಗಿ ಸಮಸ್ಯಾತ್ಮಕ” ಎಂದು ಸರ್ಕಾರ ನೆಪ ಹೇಳಿತ್ತು.