ಐಸಿಸಿ (ICC) ಆಯ್ಕೆ ಮಾಡಿರುವ 2024ರ ಟಿ20 ತಂಡಕ್ಕೆ ರೋಹಿತ್ ಶರ್ಮಾ (Rohit Sharma) ನಾಯಕನಾಗಿ ಆಯ್ಕೆಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್ ತೋರುತ್ತಿರುವ ಅವರು ಭಾರತದ ನಾಯಕನಾಗಿದ್ದರು. ಅವರು ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು.
ಐಸಿಸಿ ವರ್ಷದ ಟಿ20 ತಂಡದಲ್ಲಿ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದ್ದಾರೆ. ಒಟ್ಟಾರೆಯಾಗಿ ನಾಲ್ಕು ಭಾರತೀಯ ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರುವುದು ವಿಶೇಷ.
ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದ ಹಾರ್ದಿಕ್ ಪಾಂಡ್ಯ ಐಸಿಸಿ ತಂಡದಲ್ಲಿ ಅರ್ಹವಾಗಿಯೇ ಸ್ಥಾನ ಪಡೆದಿದ್ದಾರೆ. ಅರ್ಶ್‌ದೀಪ್ ಸಿಂಗ್ ಟಿ20 ಮಾದರಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ. ಯುಜ್ವೇಂದ್ರ ಚಹಲ್ ಅವರನ್ನು ಹಿಂದಿಕ್ಕಿದ್ದಾರೆ.
ಜಸ್‌ಪ್ರಿತ್ ಬುಮ್ರಾ ಬೌಲಿಂಗ್ ಎಕಾನಮಿಯಿಂದಾಗಿ ಪಾಕ್ ವಿರುದ್ಧದ ಹಾಗೂ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಪಡೆಯಲು ಸಾಧ್ಯವಾಯಿತು. ಅವರು 15 ವಿಕೆಟ್‌ಗಳನ್ನು ಪಡೆದಿದ್ದರು. ಅರ್ಷದೀಪ್ ಸಿಂಗ್ 17 ವಿಕೆಟ್‌ಗಳೊಂದಿಗೆ ಟೂರ್ನಿಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.
ಜಿಂಬಾಬ್ವೆಯ ಸಿಕಂದರ್ ರಾಜಾ, ಭಾರತದ ಹಾರ್ದಿಕ್ ಪಾಂಡ್ಯ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಅವರನ್ನು ಆಲ್ರೌಂಡರ್‌ಗಳನ್ನಾಗಿ ಆಯ್ಕೆ ಮಾಡಲಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಪಾಂಡ್ಯ ಅತ್ಯುತ್ತಮ ಆಲ್ರೌಂಡರ್ ಆಗಿದ್ದರೆ, ರಶೀದ್ ಅಫ್ಘಾನಿಸ್ತಾನ ತಂಡವನ್ನು ಐತಿಹಾಸಿಕ ಮೊದಲ ಸೆಮಿಫೈನಲ್ ಕಡೆಗೆ ಮುನ್ನುಗ್ಗಿಸಿದ್ದರು. ರಶೀದ್ ಖಾನ್ ಜೊತೆಗೆ ಶ್ರೀಲಂಕಾದ ವನಿಂದು ಹಸರಂಗ ಐಸಿಸಿ ವರ್ಷದ ಟಿ 20 ಐ ತಂಡದಲ್ಲಿ ಮತ್ತೊಬ್ಬ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ.
ICC ವರ್ಷದ ಟಿ20 ತಂಡ 2024
ರೋಹಿತ್ ಶರ್ಮಾ (ನಾಯಕ), ಟ್ರಾವಿಸ್ ಹೆಡ್, ಫಿಲ್ ಸಾಲ್ಟ್, ಬಾಬರ್ ಆಜಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಸಿಕಂದರ್ ರಾಜಾ, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ವನಿಂದು ಹಸರಂಗ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.