T20 World Cup 2024: ಟಿ20 ವಿಶ್ವಕಪ್ ಸೂಪರ್-8ರಿಂದ ಸೆಮಿಫೈನಲ್ ಗೆ ಏರಲು ಗ್ರೂಪ್-2 ನಲ್ಲಿರುವ ಸೌತ್ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಭಾರೀ ಫೈಟ್ ಏರ್ಪಟ್ಟಿದೆ.
ಗ್ರೂಪ್-2 ಪಾಯಿಂಟ್ಸ್ ಟೇಬಲ್ ನಲ್ಲಿ 4 ಅಂಕಗಳೊಂದಿಗೆ ಸೌತ್ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದ್ದರೆ, 2 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ದ್ವಿತೀಯ ಸ್ಥಾನದಲ್ಲಿದೆ. 2 ಅಂಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಆಡಿರುವ 2 ಪಂದ್ಯಗಳಲ್ಲೂ ಸೋತಿರುವ ಯುಎಸ್ಎ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ. ಸೌತ್ ಆಫ್ರಿಕಾ ತಂಡವು +0.625 ನೆಟ್ ರನ್ ರೇಟ್ ಹೊಂದಿದ್ದರೆ, ವೆಸ್ಟ್ ಇಂಡೀಸ್ ತಂಡ +1.814 ನೆಟ್ ರನ್ ರೇಟ್ ಸಂಪಾದಿಸಿದೆ. ಇಂಗ್ಲೆಂಡ್ ತಂಡದ ನೆಟ್ ರನ್ ರೇಟ್ +0.412 . ಈ ಮೂರು ತಂಡಗಳ ರನ್ ರೇಟ್ ಪ್ಲಸ್ ನಲ್ಲಿದ್ದು, ಕೊನೆಯ ಪಂದ್ಯದ ಫಲಿತಾಂಶವು ಎಲ್ಲಾ ತಂಡಗಳ ಪಾಲಿಗೆ ನಿರ್ಣಾಯಕವಾಗಿದೆ. ಈ ಸುತ್ತಿನ ಕೊನೆಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಇಂಗ್ಲೆಂಡ್ ತಂಡ ಯುಎಸ್ಎ ತಂಡವನ್ನು ಎದುರಿಸಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದರೆ, ಆಫ್ರಿಕನ್ನರು ನೇರವಾಗಿ ಸೆಮಿಫೈನಲ್ ತಲುಪಲಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿದರೆ ನೆಟ್ ರನ್ ರೇಟ್ ಮೂಲಕ ವಿಂಡೀಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆಗ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿದೆ. ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿದರೆ, ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್ ಗೆ ಏರುವ ಅವಕಾಶ ಹೆಚ್ಚಿದೆ. ಕೊನೆಯ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಭರ್ಜರಿ ಜಯ ಸಾಧಿಸಿ ರನ್ ರೇಟ್ ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಹಿಂದಿಕ್ಕುವ ಮೂಲಕ ಇಂಗ್ಲೆಂಡ್ ಮೊದಲ ತಂಡವಾಗಿ ಎಂಟ್ರಿ ಕೊಡಬಹುದು.
ವೆಸ್ಟ್ ಇಂಡೀಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸೋತರೆ, ಇಂಗ್ಲೆಂಡ್ ತಂಡ ಯುಎಸ್ ಎ ವಿರುದ್ಧ ಗೆದ್ದು ನೇರವಾಗಿ ಸೆಮಿಫೈನಲ್ ತಲುಪಬಹುದು. ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ಸೋತರೂ ನೆಟ್ ರನ್ ರೇಟ್ ಗಣನೆಗೆ ಬರಲಿದೆ. ಯುಎಸ್ಎ ತಂಡ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಸೆಮಿಫೈನಲ್ ತಲುಪಬಹುದು. ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳಲ್ಲಿ ಯಾರು ನೆಟ್ ರನ್ ರೇಟ್ ನಲ್ಲಿ ಮೇಲಿದ್ದಾರೆಯೋ ಅವರು ತಲುಪಬಹುದು. ಹೀಗಾಗಿ ಈ ಪಂದ್ಯಗಳು ಕುತೂಹಲ ಮೂಡಿಸಿವೆ.