ಗೌರಿ ಹಬ್ಬವು ಕೂಡ ನಾಡಿನ ದೊಡ್ಡ ಹಬ್ಬಗಳಲ್ಲಿ ಒಂದಾಗಿದ್ದು, ಮಲೆನಾಡಿನ ಭಾಗದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಹಬ್ಬ ಪ್ರಾರಂಭವಾಗುತ್ತಿದ್ದಂತೆ ಎಲ್ಲರಲ್ಲೂ ಸಂಭ್ರಮ ಮನೆ ಮಾಡಲಿದ್ದು, ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದೆ.
ಈ ಹಬ್ಬದ ದಿನ ಮದುವೆಯಾದ ಹೆಣ್ಣು ಮಕ್ಕಳನ್ನು ಅದರಲ್ಲೂ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರು ಮನೆಗೆ ಕರೆದುಕೊಂಡು ಹೋಗಿ ಭಾಗಿನವನ್ನು ನೀಡುತ್ತಾರೆ. ಪಾರ್ವತಿಯ ಸ್ವರೂಪವಾದ ಗೌರಿಯು ಈ ದಿನದಂದು ತವರು ಮನೆಗೆ ಹೋಗಿ ಬಾಗಿನವನ್ನು ಪಡೆಯುತಾಳಂತ್ತೆ ಹಾಗೆಯೇ ಹೆಣ್ಣು ಮಕ್ಕಳು ಸಹ ತವರಿಗೆ ಹೋಗಿ ಬಾಗಿನವನ್ನು ಪಡೆಯುತ್ತಾರೆ. ಗೌರಿ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಲೆನಾಡಿನ ಭಾಗದಲ್ಲಿ ಅಂದರೆ ಶಿವಮೊಗ್ಗ, ಚಿಕ್ಕಮಂಗಳೂರು, ಸಾಗರ, ತಾಳಗುಪ್ಪ ಮುಂತಾದ ಭಾಗಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.
“ಗೌರಿ ಹಬ್ಬದ ಇತಿಹಾಸ”
ಗೌರಿ ಹಬ್ಬದ ಇತಿಹಾಸ ನೋಡುವುದಾದರೆ ಪಾರ್ವತಿಯು ಶಿವನನ್ನೇ ವಿವಾಹವಾಗಬೇಕೆಂಬ ಬಯಕೆಯಿಂದ ತಪಸ್ಸು ಮಾಡುತ್ತಾಳೆ. ಶಿವ ಅವಳಿಗೆ ಒಲಿದು, ಕೈಲಾಸದಿಂದ ಭೂಮಿಗೆ ಬಂದು ಅವಳನ್ನು ವರಿಸುತ್ತಾನೆ. ಸಂಪ್ರದಾಯದಂತೆ ಪತ್ನಿಯನ್ನು ತಾನಿರುವ ಸ್ಥಳಕ್ಕೆ ಅಂದರೆ ಕೈಲಾಸಕ್ಕೆ ಕರೆದೊಯ್ಯುತ್ತಾನೆ.
ಮದುವೆಯಾದ ಹೆಣ್ಣುಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗುವ ಪದ್ಧತಿ ಇದೆ. ಅಂತೆಯೇ ಪಾರ್ವತಿ ದೇವಿಯು ಭಾದ್ರಪದ ಶುಕ್ಲದ ತೃತೀಯದಂದು ಭೂಲೋಕಕ್ಕೆ ಬರುತ್ತಾಳೆ. ಈ ಸಂದರ್ಭ ತವರಿನಲ್ಲಿ ಮನೆಮಗಳನ್ನು ತುಂಬು ಪ್ರೀತಿಯಿಂದ ಸತ್ಕರಿಸಲಾಗುತ್ತದೆ. ಸಂಭ್ರಮದಿಂದ ಆಕೆಯ ಇರುವಿಕೆಯನ್ನು ಆಚರಿಸಲಾಗುತ್ತದೆ. ಮರುದಿನ ಪಾರ್ವತಿ ಸುತ ಗಣೇಶನು ತನ್ನ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಹಾಗಾಗಿ, ಪಾರ್ವತಿ ದೇವಿಯ ತವರು ಮನೆಗೆ ಆಗಮಿಸುವುದನ್ನು ಗೌರಿ ಹಬ್ಬವಾಗಿ ಆಚರಿಸಲಾಗುತ್ತದೆ.
ಗಣೇಶ ಚತುರ್ಥಿಯ ಹಿಂದಿನ ದಿನ ಈ ಸ್ವರ್ಣಗೌರಿ ವ್ರತವನ್ನು ಹೆಣ್ಣು ಮಕ್ಕಳು ಮನೆಯಲ್ಲಿ ಯಾವಾಗಲೂ ಸುಖ ಸಂತೋಷದಿಂದ ಕೂಡಿರಲೆಂದು ಮಾಡುತ್ತಾರೆ. ಸಾಮಾನ್ಯವಾಗಿ ಒಂದ ರಿಂದ ಮೂರು ದಿನಗಳವರೆಗೆ ಆಚರಿಸಲಾಗುತ್ತಿದೆ ಕೆಲವರು ಐದು ದಿನಗಳ ವರೆಗೂ ಆಚರಿಸುತಾರೆ.
“ಗೌರಿ ಹಬ್ಬದ ತಯಾರಿ”
ಮನೆಯ ಹೆಣ್ಣು ಮಕ್ಕಳು ಹಬ್ಬದ ದಿನ ಮನೆಯನ್ನು ಸ್ವಚ್ಛಗೊಳಿಸಿ ಬಣ್ಣ ಬಣ್ಣ ರಂಗೋಲಿಗಳಿಂದ ಅಲಂಕರಿಸುತ್ತಾರೆ. ಮತ್ತು ಬಗೆ ಬಗೆಯ ತಿಂಡಿ ಕಜ್ಜಾಯಗಳನ್ನು ಮಾಡುವಲ್ಲಿ ಮಗ್ನರಾಗಿರುತ್ತಾರೆ. ಗಂಡು ಮಕ್ಕಳು ಗೌರಿ ಮಂಟಪವನ್ನು ಬಾಳೆ ಕಂಬ, ಬಣ್ಣದ ಪೇಪರ್, ಮಾವಿನ ತೋರಣ, ಬಿದಿರು ಕಡ್ಡಿಗಳಿಂದ ಅಲಂಕರಿಸುತ್ತಾರೆ.(ಆಯಾ ಮನೆತನಗಳಲ್ಲಿ ಇರುವ ಸಂಪ್ರದಾಯದ ಹಾಗೆ ಮಂಟಪಗಳನ್ನು ಮಾಡಿರುತ್ತಾರೆ ಕೆಲವು ಮನೆಗಳಲ್ಲಿ ಕೊಳು ಮಂಟಪ ಮಾಡಿದರೆ ಇನ್ನು ಕೆಲವು ಮನೆಗಳಲ್ಲಿ ಚಪ್ಪರದ ಮಂಟಪ ಮಾಡುತಾರೆ.
“ಗೌರಿ ಹಬ್ಬದ ಆಚರಣೆ”
ಹಬ್ಬದ ಮೊದಲ ದಿನ ಮನೆಯಲ್ಲಿ ಎಲ್ಲರೂ ಉಪವಾಸವಿದ್ದು ಈ ಸ್ವರ್ಣ ಗೌರಿ ವ್ರತವನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ, ಅಂದು ಸಂಜೆಯ ವೇಳೆ ಗೌರಿಯನ್ನು ತರುವುದಾಗಿರಿರುತದೆ ಮನೆಯ ಬಳಿ ಇರುವ ಬಾವಿ ಅಥವಾ ಹೊಳೆಯಿಂದ ಹೆಣ್ಣು ಮಕ್ಕಳು ಮರಳು ಮಗೆದು ಒಬ್ಬರಿಗೊಬ್ಬರು ಭಾಗಿನ ಕೊಟ್ಟು ಒಂದು ಬೆಳ್ಳಿ ಅಥವಾ ಕಂಚಿನ ಬಿಂದಿಗೆಯಲ್ಲಿ ತೆಂಗಿನ ಕಾಯಿ ಇಟ್ಟು ಗೌರಿ ಎಂದು ಭಾವಿಸಿ ಪೂಜೆ ಮಾಡಿ ಗೌರಿಯನ್ನು ತರುತ್ತಾರೆ. ಹಾಗೆ ಪೂಜೆ ಮಾಡಿ ತಂದ ಗೌರಿಯನ್ನು ಅಲಂಕರಗೊಳಿಸಿದ ಮಂಟಪದಲ್ಲಿ ಕೂರಿಸಲಾಗುತ್ತದೆ.
ಮೊದಲಿಗೆ ಗೌರಿಗೆ ಇಷ್ಟವಾದ ಹಾಲು ಬಾಳೆ ಹಣ್ಣಿನ ನೈವೇದ್ಯ ಮಾಡಲಾಗುತ್ತದೆ ಹಾಗೂ ಎಲ್ಲರೂ ಪೂಜೆ ಸಲ್ಲಿಸಿ, ಮಾಡಿದ ವಿವಿಧ ರೀತಿಯ ಅಡುಗೆಗಳನ್ನು ನೈವೇದ್ಯ ಮಾಡಲಾಗುತ್ತದೆ ನಂತರ ಎಲ್ಲರೂ ಊಟ ಮಾಡುವುದು ಮೊದಲನೆಯ ದಿನದ ಆಚರಣೆ ಆಗಿರುತ್ತದೆ. ಹಾಗೂ ಆ ರಾತ್ರಿ ಗೌರಿಗೆ ಹಚ್ಚಿದ ದೀಪ ಆರದಂತೆ ನೋಡಿಕೊಳ್ಳಲು ಅಜ್ಜಿಯರು ಸೋಬಾನೆ ಹಾಡು, ಗೌರಿಯ ಕುರಿತ ಕಥೆಗಳನ್ನು ಹೇಳುತ್ತಾ ಎಚ್ಚರ ಇದ್ದು, ದೀಪಾ ಆರದಂತೆ ಕಾಯುವುದು ಒಂದು ಪದ್ದತಿಯಾಗಿದೆ.
ಎರಡನೇ ದಿನ ಬೆಳಗ್ಗೆ ಮೊದಲು ಗೌರಿಯ ಮುಖ ತೊಳೆದು ಹೊಸ ಹೂವುಗಳನ್ನು ತಂದು ಮೂಡಿಸಿ ರಂಗೋಲಿ ಹಾಕಿ ಹಾಲು ಬಾಳೆ ಹಣ್ಣಿನ ನೈವೇದ್ಯ ಮಾಡಿ ಪೂಜೆ ಮಾಡುತಾರೆ (ಇದನ್ನು ಪ್ರತಿದಿನಲು ಮಾಡಲಾಗುತ್ತದೆ.)ಹಾಗೂ ಗಂಡು ಮಕ್ಕಳಿಂದ ಗೌರಿಯ ಪತಿಯಾಗಿರುವ ಶಿವನ ಪೂಜೆಯನ್ನು ಮಾಡಿಸಿ ಪಂಚ ಕಜ್ಜಾಯವನ್ನು ನೈವೇದ್ಯಕ್ಕೆ ಇಡಲಾಗುತ್ತದೆ.
ಕೊನೆಯ ಅಥವಾ ಮೂರನೆಯ ದಿನ ಗೌರಿಗೆ 7-9 ಬರಿ ವಿವಿಧ ರೀತಿಯ ಅಡುಗೆಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಅವಳು ಅಂದು ಗಂಡನ ಮನೆಗೆ ಹೋಗುವ ದಿನ ಹಾಗಾಗಿ ಅವಳಿಗೆ ಇಷ್ಟವಾದ ಅಡುಗೆಗಳನ್ನು ಮಾಡಿ ಬಡಿಸಲಾಗುತ್ತದೆ .
ಗೌರಿಯನ್ನು ಬಿಡುವ ದಿನವೂ ಸಹ ತರುವ ದಿನ ಮಾಡಿದ ರೀತಿಯಲ್ಲೇ ಪೂಜೆಯನ್ನು ಮಾಡಿ, ನಂತರ ಬಾಳೆ ಕಂಬಗಳಿಗೆ ಬಿದಿರಿನಿಂದ ಮಾಡಿದ ಬತ್ತಿಗಳನ್ನು ಹಚ್ಚಿ ಅದರ ಮೇಲೆ ಗೌರಿಗೆ ಅಲಂಕರಿಸಿದ ಹೂವು, ಬಳೆ, ವಿವಿಧ ಖಾದ್ಯಗಳನ್ನು ಇಟ್ಟು ಪೂಜೆ ಸಲ್ಲಿಸಿ ಕೆರೆ ಅಥವಾ ಹೊಳೆಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ. ನಂತರ ಗೌರಿಯ ತಂಗಿಯಾಗಿರುವ ಗಂಗೆಯನ್ನು ತರಲಾಗುತ್ತದೆ ಅವಳು ಒಂದು ಗಂಟೆ ಅಷ್ಟೇ ಇರುವುದು ಎಂದು ಹೇಳುತ್ತಾರೆ ಆ ಸಮಯದಲ್ಲಿ ನಾವು ಏನೇ ಬೇಡಿಕೊಂಡರು ಅದು ನೆರವೇರುತ್ತದೆ ಎಂಬ ಮಾತಿದೆ.
ಇದಿಷ್ಟು ಗೌರಿ ಹಬ್ಬದ ದಿನ ಮಾಡುವ ಪದ್ಧತಿಯಾಗಿದ್ದು ಗೌರಿ ತರುವ ಮೊದಲೆರಡು ದಿನಗಳ ಹಿಂದೆ ಸ್ವಾಣೆ ಅಜ್ಜಿ ಹಬ್ಬ ಎಂದು ಆಚರಿಸುತ್ತಾರೆ ಅದನ್ನು ಅಜ್ಜಿ ಗೌರಿ ಬರುವ ಮುಂಚೆಯೇ ಅಜ್ಜಿ ಮನೆಗೆ ಬಂದು ಎಲ್ಲ ಸೌಕರ್ಯಗಳು ಸರಿ ಇದೆಯೇ ಎಂದು ನೋಡಿಕೊಂಡು ಹೋಗಲು ಬರುತ್ತಾಳೆ ಎಂದು ಹಿರಿಯರು ಹೇಳುತ್ತಾರೆ. ಈ ಹಬ್ಬದಿಂದಲೆ ಗೌರಿ ಹಬ್ಬದ ತಯಾರಿ ಮಾಡುತಾರೆ.
-ಸಂಗೀತ ಆರ್.