ಮೈಸೂರಿನ ಎ.ಎಂ.ಬಾಬು ಅವರು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಹಾಗೂ ವಿಜಯ ರಾಘವೇಂದ್ರ ಹಾಗೂ ರಂಜನಿ ರಾಘವನ್ ನಾಯಕ, ನಾಯಕಿಯಾಗಿ ನಟಿಸಿರುವ ‘ಸ್ವಪ್ನಮಂಟಪ’ ಚಿತ್ರ ಇದೇ ಜುಲೈ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಮಾಹಿತಿ ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡ ಮಾತನಾಡಿತು. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ನಾನು ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದ “ಸ್ವಪ್ನ ಮಂಟಪ” ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದೇ ಜುಲೈ 25 ರಂದು ಬಿಡುಗಡೆಯಾಗುತ್ತಿದೆ. ಮೈಸೂರಿನ ಎ.ಎಂ.ಬಾಬು ನಿರ್ಮಾಣದ ‘ಸ್ವಪ್ನಮಂಟಪ’ವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಹಿಂದೆ ರಾಜ ತನ್ನ ಎರಡನೇ ಹೆಂಡತಿಗಾಗಿ ನಿರ್ಮಿಸುತ್ತಿದ್ದ ಮಂಟಪವನ್ನು “ಸ್ವಪ್ನ ಮಂಟಪ” ಎಂದು ಕರೆಯುತ್ತಿದ್ದರು.

ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ‘ಸ್ವಪ್ನಮಂಟಪ’ವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ನಾಯಕ ಮತ್ತು ನಾಯಕಿ, ಜನರಲ್ಲಿ ಜಾಗೃತಿ ಮೂಡಿಸಿ ಆ ಪಾರಂಪರಿಕ ಸ್ಥಳವನ್ನು ಉಳಿಸುವುದೆ ಚಿತ್ರದ ಪ್ರಮುಖ ಕಥಾಹಂದರ. ಚಿತ್ರದ ನಾಯಕ – ನಾಯಕಿಯಾಗಿ ವಿಜಯ ರಾಘವೇಂದ್ರ, ರಂಜನಿ ರಾಘವನ್ ಅಭಿನಯಿಸಿದ್ದು, ಇಬ್ಬರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡಿದೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ಸುರೇಶ್ ಅರಸ್ ಸಂಕಲನ ಹಾಗೂ ನಾಗರಾಜ್ ಆದವಾನಿ ಅವರ ಛಾಯಾಗ್ರಹಣವಿರುವ “ಸ್ವಪ್ನ ಮಂಟಪ” ಕ್ಕೆ ನಾನೇ ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಪ್ರತಿಯೊಬ್ಬ ನಟನಿಗೂ ಇಂತಹ ಒಬ್ಬ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಇರುತ್ತದೆ. ನನಗೂ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. ಈ ಚಿತ್ರದಲ್ಲಿ ಒಂದು ಹಾಡು ಕೂಡ ಹಾಡಿದ್ದೇನೆ ಎಂದರು ನಾಯಕ ವಿಜಯ ರಾಘವೇಂದ್ರ.
ಜುಲೈ 25 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ಎ.ಎಂ.ಬಾಬು.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ರಾಜಪ್ಪ ದಳವಾಯಿ, ಮೈಸೂರು ಮಂಜುಳ, ಶಿವಲಿಂಗ ಪ್ರಸಾದ್, ಛಾಯಾಗ್ರಾಹಕ ನಾಗರಾಜ ಆದವಾನಿ, ಸಹ ನಿರ್ದೇಶಕ ನಟರಾಜ್ ಶಿವು ಮುಂತಾದವರು ಇದ್ದರು.