ಬೆಂಗಳೂರು: ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೆ ತಯಾರಿ ಭರದಿಂದ ಸಾಗಿದೆ. ಈಗಾಗಲೇ ವಿವಿಧ ಇಲಾಖೆಗಳ ಸಚಿವರು, ಅಧಿಕಾರಗಳ ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಮುದಾಯಗಳ ಮಠಾಧೀಶರ ಜೊತೆಗೂ ಸೋಮವಾರ ಸಭೆ ನಡೆಸಿ ಸಿಎಂಗೆ ಮನವಿ ಮಾಡಿದ್ದಾರೆ.
ಸಚಿವರಾದ ಎಂಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಲಿಂಗಾಯತ ಸಮುದಾಯದ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಮನವಿ ಸಲ್ಲಿಸಿದ್ದಾರೆ.
ಬಸವಧರ್ಮ ಪೀಠ ಬಸವ ಕಲ್ಯಾಣದ ಸಿದ್ದರಾಮೇಶ್ವರ, ಅನುಭವ ಮಂಟಪದ ಶಿವಾನಂದ ಸ್ವಾಮೀಜಿ, ಹಿರೇಮಠ ಸಂಸ್ಥಾನದ ಬಸವಲಿಂಗ ದೇವರು, ಉರಿಲಿಂಗದ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವರು ಈ ನಿಯೋಗದಲ್ಲಿದ್ದರು.
ಸ್ವಾಮೀಜಿಗಳ ಬೇಡಿಕೆ?
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಸವ ಪುತ್ಥಳಿ ಪ್ರತಿಷ್ಠಾಪನೆ.
ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಬೃಹತ್ ಶರಣ ದರ್ಶನ ಕೇಂದ್ರ (ಅಕ್ಷರಧಾಮ ಮಾದರಿಯಲ್ಲಿ) ಸ್ಥಾಪಿಸುವುದು.
ಉದ್ಯಾನವನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸುವುದು ಹಾಗೂ ಪ್ರವಾಸಿ ತಾಣವನ್ನಾಗಿಸುವುದು.
ಶರಣರ ಜನ್ಮ ಸ್ಥಳ, ಐಕ್ಯಸ್ಥಳ ಹಾಗೂ ಇತರೆ ಸ್ಮಾರಕಗಳ ರಕ್ಷಣೆಗಾಗಿ ಪ್ರತ್ಯೇಕ ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ ರಚಿಸುವುದು.
ಬಸವ ಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಉಳಿಯಲು ಅಲ್ಲಿಯೇ ವಚನ ವಿಶ್ವವಿದ್ಯಾಲಯ ಮತ್ತು ಸಂಶೋಧನ ಕೇಂದ್ರ ಆರಂಭಿಸುವುದು.
ಜಿಲ್ಲಾ ಕೇಂದ್ರಗಳಲ್ಲಿ ಬಸವಭವನ ನಿರ್ಮಿಸುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು.
ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರ ಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸುವುದು.
ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿ ವರ್ಷ 100 ಕೋಟಿ ರೂ.ನಂತೆ 5 ವರ್ಷಗಳಲ್ಲಿ 500 ಕೋಟಿ ರೂ. ಅನುದಾನ ಘೋಷಿಸುವಂತೆ ಮನವಿ.