ಬೆಂಗಳೂರು: ಮಹಿಳೆಯರಿಬ್ಬರು ಸ್ವಾಮೀಜಿಗೆ ಅಶ್ಲೀಲ ವಿಡಿಯೋ, ಫೋಟೋ ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ತಿಪಟೂರಿನ ಮಠವೊಂದರ ಸ್ವಾಮೀಜಿಯೊಬ್ಬರಿಗೆ ಅಶ್ಲೀಲ ವಿಡಿಯೊ, ಫೋಟೊ ಮುಂದಿಟ್ಟು ಬರೋಬ್ಬರಿ 6 ಕೋಟಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಸ್ವಾಮೀಜಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ಆರೋಪಿ ವಿದ್ಯಾ ಬಿರಾದಾರ್ ಪಾಟೀಲ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಅಲ್ಲದೇ, ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದಿದ್ದಾರೆ.
ಈ ಮಹಿಳೆ ಬಾಗೇವಾಡಿ ಮೂಲದವರು ಎನ್ನಲಾಗಿದೆ. ಬಂಧಿತ ಮಹಿಳೆ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತ ಬಿ.ಎಸ್. ಪಾಟೀಲ್‌ರ ಸಹೋದರಿ ಎಂದು ಹೇಳಿಕೊಂಡು ವಂಚಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ 31ರಂದು ದೂರವಾಣಿ ಕರೆ ಮಾಡಿದ್ದ ಮಹಿಳೆಯು ಇಬ್ಬರು ಬಂದು ವಿಡಿಯೋ ನೀಡಿ, ದೂರು ಸಲ್ಲಿಸಿದ್ದಾರೆ ಎಂದು ಹೇಳಿ ಪದೇ ಪದೇ ಕರೆ ಮಾಡಿ 6 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗುರೂಜಿ ದೂರು ನೀಡಿದ್ದಾರೆ.
ಕೇಳಿದಷ್ಟು ಹಣ ನೀಡದಿದ್ದರೆ ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇನೆ ಎಂದು ವಾಟ್ಸ್ ಆಪ್ ಮೂಲಕ ಬೆದರಿಕೆ ಹಾಕಿದ್ದಾರೆ. ನನ್ನ ಭಾವಚಿತ್ರ ಹೋಲುವಂತೆ ನಕಲಿ ವಿಡಿಯೊ ಮತ್ತು ಫೋಟೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಸ್ವಾಮೀಜಿ ದೂರು ನೀಡಿದ್ದು, ಸದ್ಯ ಪೊಲೀಸರು ಓರ್ವ ಮಹಿಳೆ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.