ಬೆಂಗಳೂರು: “BAD” ಚಿತ್ರಕ್ಕೆ ಸಿನಿ ರಸಿಕರು ಗುಡ್ ಎನ್ನುತ್ತಿದ್ದಾರೆ.
ಪಿ.ಸಿ.ಶೇಖರ್ ನಿರ್ದೇಶನದ ಹಾಗೂ ನಕುಲ್ ಗೌಡ – ಮಾನ್ವಿತ ಹರೀಶ್ ಅಭಿನಯದ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದರೆ. “BAD” ಚಿತ್ರ ಬಿಡುಗಡೆಯಾಗಿ ಎರಡು ವಾರಗಳಾಗಿ ಮೂರನೇ ವಾರ ಆರಂಭವಾಗಿದೆ. ವಿಭಿನ್ನ ಜಾನರ್ ನ ಈ ಚಿತ್ರವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ.
ನನ್ನ ನಿರ್ದೇಶನದ “ರೋಮಿಯೋ”, ” ರಾಗ”, “ಚಡ್ಡಿದೋಸ್ತ್”, ” ಅರ್ಜುನ್”, “ಲವ್ ಬರ್ಡ್ಸ್” ಚಿತ್ರಗಳನ್ನು ಕನ್ನಡ ಕಲಾಭಿಮಾನಿಗಳು ಯಶಸ್ವಿಯಾಗಿ ಪ್ರೋತ್ಸಾಹಿಸಿದ್ದಾರೆ. ಈಗ ಆ ಸಾಲಿಗೆ “ಬ್ಯಾಡ್” ಚಿತ್ರ ಸೇರ್ಪಡೆಯಾಗಿದೆ. ಪರಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ಕನ್ನಡ ಚಿತ್ರವೊಂದು ಮೂರನೇ ವಾರದಲ್ಲಿ ಪ್ರದರ್ಶನ ಕಾಣುತ್ತಿರುವುದು ಹೆಮ್ಮೆಯಾಗಿದೆ.
“ಪ್ರೀತಿಯ ರಾಯಭಾರಿ” ಚಿತ್ರದ ನಕುಲ್ ಗೌಡ ಅಭಿನಯಕ್ಕೆ ಫಿದಾ ಆಗಿದ್ದ ಅಭಿಮಾನಿಗಳು ಈ ಚಿತ್ರದ ಅವರ ನಟನೆಗೂ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ವೆಂಕಟೇಶ್ ಗೌಡ ಅವರಿಗೆ, ಚಿತ್ರತಂಡಕ್ಕೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ಹೇಳಿದ್ದಾರೆ.

“ಬ್ಯಾಡ್” ನನ್ನ ಅಭಿನಯದ ಎರಡನೇ ಚಿತ್ರ. ನನ್ನ ಎರಡನೇ ಚಿತ್ರ ಮೂರನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಬಹಳ ಖುಷಿಯಾಗಿದೆ. ಲವ್, ಆಕ್ಷನ್ ಅಂತಹ ಮಾಮೂಲಿ ಜಾನರ್ ನ ಕಥಾಹಂದರವಲ್ಲದೆ, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ನನಗೆ ತಿಳಿದ ಹಾಗೆ “ಉಳಿದವರು ಕಂಡಂತೆ” ಚಿತ್ರದ ನಂತರ ಈ ರೀತಿಯ ಕಥಾಹಂದರ ಹೊಂದಿರುವ ಚಿತ್ರ ಬಂದಿರಲಿಲ್ಲ. ನಮ್ಮ ಈ ಪ್ರಯತ್ನವನ್ನು ಇಷ್ಟ ಪಟ್ಟಿದ್ದಾರೆ. ಪರಭಾಷೆ ಚಿತ್ರಗಳ ನಡುವೆಯೂ ನಮ್ಮ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗಳಿಕೆ(ಕಲೆಕ್ಷನ್) ಕೂಡ ಉತ್ತಮವಾಗಿದೆ. ಹೊಸಬರ ಚಿತ್ರವೊಂದು ಎರಡು ವಾರಗಳಲ್ಲಿ 46 ಲಕ್ಷಗಳಷ್ಟು ಕಲೆಕ್ಷನ್ ಮಾಡಿದೆ. ಇದೆಲ್ಲಾ ಸಾಧ್ಯವಾಗಿದ್ದು ಕನ್ನಡ ಕಲಾಭಿಮಾನಿಗಳಿಂದ. ಅವರಿಗೆ ಹಾಗೂ ನಮ್ಮ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ತುಂಬು ಹೃದಯದ ಧನ್ಯವಾದ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದು ನಾಯಕ ನಕುಲ್ ಗೌಡ ತಿಳಿಸಿದ್ದಾರೆ.
ನಿರ್ಮಾಪಕ ವೆಂಕಟೇಶ್ ಗೌಡ ಹಾಗೂ ನಟಿ ಅಪೂರ್ವ ಭಾರದ್ವಾಜ್ ಸಹ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ “BAD” ಚಿತ್ರಕ್ಕೆ ನಿರ್ದೇಶಕ ಪಿ.ಸಿ.ಶೇಖರ್ ಅವರೆ ಸಂಕಲನ ಕಾರ್ಯ ಮಾಡಿದ್ದಾರೆ. ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ “BAD” ಚಿತ್ರಕ್ಕೆ ಸಚಿನ್ ಜಗದೀಶ್ವರ್ ಎಸ್ ಬಿ ಸಂಭಾಷಣೆ ಬರೆದಿದ್ದಾರೆ.
ನಕುಲ್ ಗೌಡ “BAD” ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.