ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಮುಗಿಯಲು 2 ದಿನಗಳಷ್ಟೇ ಬಾಕಿಯಿರುವಂತೆಯೇ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ಸ್ವಚ್ಛ ಮಹಾ ಕುಂಭ್ ಎಂಬ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಸೋಮವಾರ ಚಾಲನೆ ಸಿಗಲಿದೆ. ಅದರಂತೆ ಸುಮಾರು 15,000 ನೈರ್ಮಲ್ಯ ಕಾರ್ಮಿಕರು ಮಹಾಕುಂಭನಗರದ 4 ವಲಯಗಳಲ್ಲೂ ದೊಡ್ಡಮಟ್ಟದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಿದ್ದಾರೆ. ಈ ಐತಿಹಾಸಿಕ ಪ್ರಯತ್ನದ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಉ.ಪ್ರದೇಶ ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಮಹಾಕುಂಭವು ಪ್ರತಿ ದಿನವೂ ಸ್ವಚ್ಛತೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಈ ಅದ್ಧೂರಿ ಧಾರ್ಮಿಕ ಸಮ್ಮೇಳನ ಅತ್ಯುತ್ತಮ ಗುಣಮಟ್ಟದ ನೈರ್ಮಲ್ಯವನ್ನು ಕಾಪಾಡಿಕೊಂಡಿದ್ದು, ಸ್ವಚ್ಛ ಮಹಾ ಕುಂಭ ಎಂಬ ಹೆಸರನ್ನೂ ಗಳಿಸಿದೆ ಎಂದು ಉತ್ತರಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆಯೂ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಯತ್ನದ ಮೂಲಕ ವಿಶ್ವದಾಖಲೆಗೆ ಪ್ರಯತ್ನಿಸಲಾಗಿತ್ತು. ಆಗ ಸುಮಾರು 300 ನೈರ್ಮಲ್ಯ ಕಾರ್ಮಿಕರು ಪ್ರಯಾಗ್‌ರಾಜ್‌ನ ವಿವಿಧ ಘಾಟ್‌ಗಳಲ್ಲಿ ನದಿ ಸ್ವಚ್ಛತೆಯ ಅಭಿಯಾನ ಕೈಗೊಂಡಿದ್ದರು.
ಸರ್ಕಾರದ ಯೋಜನೆಯ ಪ್ರಕಾರ, ಇಂದು ಮಧ್ಯಾಹ್ನವೇ ಮೆಗಾ ಸ್ವಚ್ಛತಾ ಕಾರ್ಯಕ್ರಮ ಆರಂಭವಾಗಲಿದೆ. ಸಾವಿರಾರು ನೈರ್ಮಲ್ಯ ಕಾರ್ಮಿಕರು ಹೆಲಿಪ್ಯಾಡ್ ಪಾರ್ಕಿಂಗ್-ಸೆಕ್ಟರ್ 2, ಪ್ರಯಾಗ್ ಪ್ರದೇಶ (ವಲಯ 1), ಭಾರದ್ವಾಜ್ ಘಾಟ್-ಸೆಕ್ಟರ್ 7, ಸಲೋರಿ/ನಾಗವಾಸುಕಿ ಪ್ರದೇಶ (ವಲಯ 2), ಓಲ್ಡ್ ಜಿಟಿ ರಸ್ತೆ ಮತ್ತು ಹರೀಶ್ಚಂದ್ರ ಘಾಟ್- ಸೆಕ್ಟರ್ 5 ಮತ್ತು 18, ಝೂನ್ಸಿ ಏರಿಯಾ (ವಲಯ 3) ಮತ್ತು ಚಕ್ರಮಾಧವ್ ಘಾಟ್-ಸೆಕ್ಟರ್ 24, ಅರೈಲ್ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲಿದ್ದಾರೆ.