ಬೆಂಗಳೂರು: ದ್ವಿಚಕ್ರ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಜಿಎಸ್‌ಟಿ ಮಂಡಳಿಯು 350cc ವರೆಗಿನ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು 28% ರಿಂದ 18% ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ ವಾಹನಗಳ ಬೆಲೆಯಲ್ಲಿ ಭಾರಿ ಕಡಿತವನ್ನು ಘೋಷಿಸಿದೆ. ಈ ನಿರ್ಧಾರದಿಂದಾಗಿ, ಹಬ್ಬದ ಸೀಸನ್‌ಗೂ ಮುನ್ನ ವಾಹನಗಳ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
ಈ ಹೊಸ ಬೆಲೆ ಇಳಿಕೆಯ ಪ್ರಯೋಜನವು ಹೋಂಡಾದ ಬಹುತೇಕ ಎಲ್ಲಾ ಜನಪ್ರಿಯ ಮಾದರಿಗಳಿಗೂ ಲಭ್ಯವಾಗಲಿದೆ. ಭಾರತದ ಅತ್ಯಂತ ಜನಪ್ರಿಯ ಸ್ಕೂಟರ್‌ಗಳಾದ ಹೋಂಡಾ ಆಕ್ಟಿವಾ 110 (7,874 ರೂಪಾಯಿ ವರೆಗೆ), ಆಕ್ಟಿವಾ 125 (8,259 ರೂಪಾಯಿ ವರೆಗೆ) ಹಾಗೂ ಡಿಯೋ 110 (7,157 ರೂಪಾಯಿ ವರೆಗೆ) ಮತ್ತು ಡಿಯೋ 125 (8,042 ರೂಪಾಯಿ ವರೆಗೆ) ಗಮನಾರ್ಹವಾಗಿ ಅಗ್ಗವಾಗಲಿವೆ. ಅದೇ ರೀತಿ, ಹೆಚ್ಚು ಮಾರಾಟವಾಗುವ ಬೈಕ್‌ಗಳಾದ ಶೈನ್ 100 (6,256 ರೂಪಾಯಿ ವರೆಗೆ), ಶೈನ್ 125 (7,443 ರೂಪಾಯಿ ವರೆಗೆ), ಮತ್ತು ಎಸ್‌ಪಿ125 (8,447 ರೂಪಾಯಿ ವರೆಗೆ) ಬೆಲೆಯಲ್ಲೂ ಇಳಿಕೆಯಾಗಲಿದೆ. ಹೆಚ್ಚು ಜನಪ್ರಿಯವಾಗಿರುವ ಯುನಿಕಾರ್ನ್ ಬೈಕ್ 9,948 ರೂಪಾಯಿ ವರೆಗೆ ಅಗ್ಗವಾಗಲಿದೆ. ಪ್ರೀಮಿಯಂ ವಿಭಾಗದಲ್ಲಿ, ಹಾರ್ನೆಟ್ 2.0 (13,026 ರೂಪಾಯಿ ವರೆಗೆ) ಮತ್ತು NX200 (13,978 ರೂಪಾಯಿ ವರೆಗೆ) ಬೆಲೆ ಕಡಿಮೆಯಾಗಲಿದೆ. ಸಿಬಿ350 ಸರಣಿಯ ಬೈಕ್‌ಗಳು ಗರಿಷ್ಠ ಪ್ರಯೋಜನ ಪಡೆಯಲಿದ್ದು, ಸಿಬಿ350 H’ness (18,598 ರೂಪಾಯಿ ವರೆಗೆ), ಸಿಬಿ350RS (18,857 ರೂಪಾಯಿ ವರೆಗೆ), ಮತ್ತು ಸಿಬಿ350 ಮಾದರಿಯು 18,887 ರೂಪಾಯಿ ವರೆಗೆ ಅಗ್ಗವಾಗಲಿದೆ.
ಈ ಕುರಿತು ಮಾತನಾಡಿದ ಹೋಂಡಾ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯೋಗೇಶ್ ಮಾಥುರ್, “ಭಾರತ ಸರ್ಕಾರದ ಜಿಎಸ್‌ಟಿ ಸುಧಾರಣೆಯನ್ನು ನಾವು ಸ್ವಾಗತಿಸುತ್ತೇವೆ. ಈ ನಿರ್ಧಾರವು ವೈಯಕ್ತಿಕ ಸಂಚಾರವನ್ನು ಸುಲಭಗೊಳಿಸುವುದಲ್ಲದೆ, ಆರ್ಥಿಕ ಬೆಳವಣಿಗೆಗೂ ಉತ್ತೇಜನ ನೀಡಲಿದೆ. ದ್ವಿಚಕ್ರ ವಾಹನಗಳು ಮತ್ತು ಬಿಡಿಭಾಗಗಳ ಮೇಲಿನ ಜಿಎಸ್‌ಟಿ ಕಡಿತವು ಸಕಾಲಿಕ ಕ್ರಮವಾಗಿದ್ದು, ವಾಹನಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಹೊಸ ಜಿಎಸ್‌ಟಿ ನಿಯಮಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ದ್ವಿಚಕ್ರ ವಾಹನಗಳ ಜೊತೆಗೆ ಸಣ್ಣ ಕಾರುಗಳು, ತ್ರಿಚಕ್ರ ವಾಹನಗಳು, ಬಸ್, ಟ್ರಕ್ ಮತ್ತು ಆಂಬ್ಯುಲೆನ್ಸ್‌ಗಳ ಮೇಲಿನ ಜಿಎಸ್‌ಟಿಯೂ 18% ಕ್ಕೆ ಇಳಿಕೆಯಾಗಿದೆ. ಆದರೆ, ಐಷಾರಾಮಿ ಕಾರುಗಳು, ದೊಡ್ಡ ಎಸ್‌ಯುವಿಗಳು ಮತ್ತು 350cc ಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳು ಇನ್ನು ಮುಂದೆ 40% ಜಿಎಸ್‌ಟಿ ವ್ಯಾಪ್ತಿಗೆ ಬರಲಿವೆ. ಜೊತೆಗೆ, ವಾಹನಗಳ ಬಿಡಿಭಾಗಗಳಿಗೆ ಏಕರೂಪವಾಗಿ 18% ತೆರಿಗೆ ಮತ್ತು ಕೃಷಿ ಟ್ರ್ಯಾಕ್ಟರ್‌ಗಳ ಮೇಲಿನ ಜಿಎಸ್‌ಟಿಯನ್ನು 5% ಕ್ಕೆ ಇಳಿಸಿರುವುದು ಕೂಡ ಮಹತ್ವದ ಸುಧಾರಣೆಯಾಗಿದೆ.