ಬೆಂಗಳೂರು: ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್ ನಿರ್ಮಾಣದ, ಕಿರಣ್ ಕುಮಾರ್ ಚೊಚ್ಚಲ ನಿರ್ದೇಶನದ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಸೂತ್ರಧಾರಿ ಮೇ 9 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಿರ್ಮಾಪಕರಾದ ಚೇತನ್ ಗೌಡ, ಮುನೇಗೌಡ ಹಾಗೂ ರಾಜೇಶ್ ಅವರು “ಸೂತ್ರಧಾರಿ” ಚಿತ್ರದ ಬಿಡುಗಡೆ ದಿನಾಂಕ ಅನಾವರಣ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಈ ವೇಳೆ ಚಿತ್ರ ತಂಡದ ಸದಸ್ಯರು ಮಾತನಾಡಿದರು.
ನಿರ್ಮಾಪಕ ನವರಸನ್ ಮಾತನಾಡಿ, ನಾನು ನಿರ್ಮಾಪಕ ಮತ್ತು ನಿರ್ದೇಶಕ ಮಾತ್ರ ಅಲ್ಲ. ವಿತರಕ ಕೂಡ. ಸುಮಾರು 200 ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಕಳೆದವರ್ಷದಿಂದ ಇಲ್ಲಿಯವರೆಗೆ ವಾರಕ್ಕೆ ಹತ್ತರಂತೆ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಈ ಸಮಯದಲ್ಲಿ ನನ್ನ ಚಿತ್ರವನ್ನು ಬಿಡುಗಡೆ ಮಾಡಲಿಲ್ಲ. ಈಗ ನಲವತ್ತು ದಿನಗಳ ಮುಂಚೆ ಚಿತ್ರದ ದಿನಾಂಕ ಘೋಷಣೆ ಮಾಡುತ್ತಿದ್ದೇನೆ. ಮೇ 9 ರಂದು ನಮ್ಮ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಚಂದನ್ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ.
ಚಂದನ್ ಶೆಟ್ಟಿ ಮಾತನಾಡಿ, ನಾಯಕನಾಗಿ ಇದು ಮೊದಲ ಸಿನಿಮಾ. ನನ್ನ ಪಾತ್ರ ಬಹಳ ಚೆನ್ನಾಗಿದೆ. ಈ ಚಿತ್ರದಲ್ಲಿ ನಟಿಸಿದ ನಂತರ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದಿದ್ದಾರೆ.
ನಟಿ ಸಂಜನಾ ಆನಂದ್ ಮಾತನಾಡಿ , ನಾನು ಮತ್ತು ಚಂದನ್ ಅಭಿನಯಿಸಿರುವ ಈ ಚಿತ್ರದ “ಡ್ಯಾಶ್” ಹಾಡು ಇಪ್ಪತ್ತೊಂಭತ್ತಕ್ಕೂ ಅಧಿಕ ಮಿಲಿಯನ್ ವೀಕ್ಷಣೆಯಾಗಿದೆ. ಚಿತ್ರ ಕೂಡ ಇದೇ ರೀತಿ ಯಶಸ್ವಿಯಾಗಲಿದೆ ಎಂದಿದ್ದಾರೆ.
ನಟಿ ಅಪೂರ್ವ ಮಾತನಾಡಿ, ನಟ ಚಂದನ್ ಶೆಟ್ಟಿ ಜೊತೆ ನಟಿಸಿದ್ದು ಒಳ್ಳೆಯ ಅನುಭವ, ಒಳ್ಳೆಯ ಪಾತ್ರ ಸಿಕ್ಕಿದೆ. ಮೇ 9 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನನ್ನ ಪಾತ್ರವೂ ಚೆನ್ನಾಗಿದೆ ಎಂದು ಹೇಳಿದರು.
ನಿರ್ದೇಶಕ ಕಿರಣ್ ಕುಮಾರ್, ಚಿತ್ರದಲ್ಲಿ ನಟಿಸಿರುವ ಗಣೇಶ್ ನಾರಾಯಣ್, ಪ್ರಶಾಂತ್ ನಟನ, ಮೀರಾಶ್ರೀ, ಸುಶ್ಮಿತಾ, ಪಲ್ಲವಿ ಮುಂತಾದವರು “ಸೂತ್ರಧಾರಿ” ಚಿತ್ರದ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.