ಕೋಲಾರ: ಜಿಲ್ಲೆಯ ಹೊರ ವಲಯದಲ್ಲಿ ಅಪರಿಚತ ಸೂಟ್ ಕೇಸ್ ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿತ್ತು.
ಕೋಲಾರ ಹೊರವಲಯದ ಟಮಕ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸೂಟ್ ಕೇಸ್ (Suitcase) ಪತ್ತೆಯಾಗಿದೆ. ಹೀಗಾಗಿ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ವ್ಯಕ್ತವಾಗಿತ್ತು.
ಬಿದ್ದಿದ್ದ ಅಪರಿಚಿತ ಸೂಟ್ ಕೇಸ್ ನಲ್ಲಿ ಅಲಾರಾಂ ರೀತಿಯ ಶಬ್ದ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಂಬ್ ಇರಬಹುದು ಎಂದು ಸ್ಥಳೀಯರು ಗಾಬರಿಗೊಂಡಿದ್ದರು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಗಲ್ ಪೇಟೆ ಠಾಣೆ ಪೊಲೀಸರು, ಎಸ್ಪಿ ನಿಖಿಲ್, ಹೆಚ್ಚುವರಿ ಎಸ್ಪಿ ರವಿಶಂಕರ್ ಭೇಟಿ ನೀಡಿದ್ದರು.

ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.
ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ ಅದು ಕ್ರೌನ್ ಕಂಪನಿಯ ಸೂಟ್ ಕೇಸ್ ಎನ್ನುವುದು ಗೊತ್ತಾಗಿದೆ. ಅದು ಸೆನ್ಸಾರ್ ಸೂಟ್ ಕೇಸ್ ಆಗಿದ್ದು, ಯಾರೋ ಲಾಕರ್ ಪಾಸ್ವರ್ಡ್ ನ್ನು ತಪ್ಪಾಗಿ ಹಾಕಿದ್ದರಿಂದ ಈ ರೀತಿ ಶಬ್ದ ಬಂದಿದೆ ಎನ್ನಲಾಗಿದೆ.