ಬೆಂಗಳೂರು: ಪತಿಯ ಮೇಲಿನ ಅನುಮಾನಕ್ಕೆ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪತಿಯು ಬೇರೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಅನುಮಾನಗೊಂಡು ಪತ್ನಿ ನೇಣಿಗೆ ಶರಣಾಗಿದ್ದಾರೆ.
ಐಶ್ವರ್ಯಾ(26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ನವೀನ್ ಸಲೂನ್ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪತ್ನಿಗೆ ಪತಿಯ ಮೇಲೆ ಅನುಮಾನ ಹೆಚ್ಚಾಗಿತ್ತು. ಇದು ವಿಪರೀತವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನವೀನ್ ಹಾಗೂ ಐಶ್ವರ್ಯಾ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪತಿ ನವೀನ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂಬ ಅನುಮಾನ ಐಶ್ವರ್ಯಗೆ ಇತ್ತು. ಇದೇ ವಿಚಾರಕ್ಕೆ ನವೀನ್ ಹಾಗೂ ಐಶ್ವರ್ಯಾ ಮಧ್ಯ ಕಳೆದ ಒಂದು ವಾರದಿಂದ ಗಲಾಟೆ ಕೂಡ ನಡೆಯುತ್ತಿತ್ತು ಎನ್ನಲಾಗಿದೆ.
ಈ ಮಧ್ಯೆ ನವೀನ್, ಪತ್ನಿ ಐಶ್ವರ್ಯಗೆ ತಿಳಿಸದೆ ಧರ್ಮಸ್ಥಳಕ್ಕೆ ಟ್ರಿಪ್ ಗೆ ಹೋಗಿದ್ದ. ಇದರಿಂದ ಐಶ್ವರ್ಯ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಧರ್ಮಸ್ಥಳದಿಂದ ಬಂದ ನಂತರ ಇಬ್ಬರ ಮಧ್ಯೆ ಜಗಳ ನಡೆದಿದೆ. ಇದು ವಿಕೋಪಕ್ಕೆ ಹೋಗಿ ಪತ್ನಿ ನೇಣಿಗೆ ಶರಣಾಗಿದ್ದಾರೆ. ಸದ್ಯ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.