ಬೆಂಗಳೂರು: ಇಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿ ಅನೈತಿಕ ಸಂಬಂಧದ ಶಂಕೆಯಲ್ಲಿ ಮೊದಲ ಪತ್ನಿಯನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಆನೇಕಲ್ ತಾಲೂಕಿನ ರಾಚಮಾರನ ಹಳ್ಳಿ ಗ್ರಾಮದ ನಿವಾಸಿ ಬಾಬು, ಕಳೆದ 9 ವರ್ಷಗಳ ಹಿಂದೆ ಇಬ್ಬರನ್ನು ಮದುವೆಯಾಗಿದ್ದರು. ಇಬ್ಬರಿಗೂ ಒಂದೇ ಮಂಟಪದಲ್ಲಿ ತಾಳಿ ಕಟ್ಟಿದ್ದ. ಮೊದಲ ಪತ್ನಿಗೆ ಎರಡು ಮಕ್ಕಳು ಹಾಗೂ ಎರಡನೇ ಪತ್ನಿಗೂ ಎರಡು ಮಕ್ಕಳು ಇದ್ದರು. ಆದರೆ, ಇತ್ತೀಚೆಗೆ ಮೊದಲನೇ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆಗಾಗ ಜಗಳವಾಗುತ್ತಿತ್ತು.
ಭಾನುವಾರವೂ ಇದೇ ವಿಷಯವಾಗಿ ಜಗಳ ನಡೆದಿದೆ. ಆಗ ಹೆಂಡತಿಗೆ ಬಲವಾಗಿ ಹೊಡೆದಿದ್ದಾನೆ. ಸೋಮವಾರ ಎಬ್ಬಿಸಿ ಅಂಬಲಿ ಕುಡಿಸಿ ಮಲಗಿಸಿದ್ದಾನೆ. ಆದರೆ, ಅವನ ಹೊಡೆತದ ನೋವು ತಾಳಲಾರದೆ ಮಹಿಳೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಮೃತ ಮಹಿಳೆ ಮೂಲತಃ ಮೈಸೂರಿನವಳಾಗಿದ್ದು, 9 ವರ್ಷದ ಹಿಂದೆ ಬಾಬುವನ್ನು ಪ್ರೀತಿಸಿ ಮದುವೆಯಾಗಿದ್ದಳು.
ಜ.25 ರಂದು ಬೇರೊಬ್ಬರೊಂದಿಗೆ ಓಡಿ ಹೋಗಿದ್ದಳು. ಅನಂತರ ಮಾ.3 ರಂದು ಪೊಲೀಸರು ಆಕೆಯ ಜೊತೆ ಮಾತನಾಡಿ ಮತ್ತೆ ವಾಪಸ್ ಕರೆತಂದಿದ್ದರು ಎನ್ನಲಾಗಿದೆ. ಆದರೆ, ಅದೇ ವಿಷಯವಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಅದು ಕೊಲೆಯಲ್ಲಿ ಅಂತ್ಯವಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.