ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರ (Ram Mandir) ಸ್ಫೋಟಕ್ಕೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಲಾಗಿದೆ. ಹರಿಯಾಣದ ಫರೀದಾಬಾದ್ ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಅಬ್ದುಲ್ ರೆಹಮಾನ್ ಎಂಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಎಟಿಎಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದವನಾದ ಅಬ್ದುಲ್ ರೆಹಮಾನ್ ವಯಸ್ಸು ಕೇವಲ 19. ಈತನಿಂದ ಎರಡು ಗ್ರೆನೇಡ್ ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ಎಟಿಎಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಶಂಕಿತ ಉಗ್ರನನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈತನನ್ನು ಬಂಧಿಸಿದ್ದು ಹೇಗೆ?
ಅಬ್ದುಲ್ ರೆಹಮಾನ್ ಪ್ರಮುಖ ದಾಳಿಯೊಂದಕ್ಕೆ ಸಂಚು ರೂಪಿಸಿದ್ದಾನೆ ಎಂದು ಗುಜರಾತ್ ಎಟಿಎಸ್ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಇದಾದ ಕೂಡಲೇ ಎಟಿಎಸ್ ಅಧಿಕಾರಿಗಳು ಹರಿಯಾಣ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆಗೆ (ಎಸ್ ಟಿ ಎಫ್) ಮಾಹಿತಿ ನೀಡಿದ್ದಾರೆ. ಕೊನೆಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಈತನನ್ನು ವಶಪಡಿಸಿಕೊಂಡಿದ್ದಾರೆ.
ಅಬ್ದುಲ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ರಾಮಮಂದಿರದ ಮೇಲೆ ದಾಳಿಯ ಕುರಿತು ಅಬ್ದುಲ್ ರೆಹಮಾನ್ ಸ್ಫೋಟಕ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫೈಜಾಬಾದ್ ನಿಂದ ಫರೀದಾಬಾದ್ ಗೆ ಬಂದ ನನಗೆ ಅನಾಮಧೇಯ ವ್ಯಕ್ತಿಯೊಬ್ಬ ಎರಡು ಗ್ರೆನೇಡ್ ಗಳನ್ನು ಕೊಟ್ಟ. ಫರೀದಾ ಬಾದ್ ನಲ್ಲೇ ಇರುವಂತೆ ನನಗೆ ಸೂಚಿಸಲಾಗಿತ್ತು ಎಂದು ಹೇಳಿದ್ದಾನೆ. ಇವರ ಸಂಚು ರಾಮಮಂದಿರವನ್ನು ಸ್ಫೋಟಿಸುವುದಾಗಿತ್ತು ಎಂಬುದಾಗಿ ತಿಳಿದುಬಂದಿದೆ.