ಹಾವೇರಿ: ಅಪ್ರಾಪ್ತ ಬಾಲಕಿಯನ್ನ ಮನೆಯಲ್ಲಿ ಕೂಡಿಟ್ಟು ಬಳಿಕ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯ ಗ್ರಾಮಸ್ಥರು ಖತರ್ನಾಕ್ ಮಹಿಳೆಯ ಕೃತ್ಯ ಬಯಲಿಗೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಹಿಳೆಯೋರ್ವಳು 14 ವರ್ಷದ ಬಾಲಕಿಯನ್ನು ಮನೆಯಲ್ಲಿ ಮಂಚದ ಕೆಳಗೆ ಕೂಡಿಟ್ಟಿದ್ದಳು ಎನ್ನಲಾಗಿದೆ. ಆಕೆಯ ತಲೆಯ ಬೊಳಿಸಿ, ಅಕ್ಕಪಕ್ಕದವರಿಗೆ ಗೊತ್ತಾಗದ್ದಂತೆ ಕೂಡಿಟಿದ್ದಾಳೆ. ಬ್ಯಾಗವಾದಿ ಗ್ರಾಮದ 55 ವರ್ಷದ ಮಹಿಳೆ ಲಕ್ಕವ್ವ ಈ ಕೃತ್ಯ ಎಸಗಿದ ಮಹಿಳೆ ಎನ್ನಲಾಗಿದೆ.
ಅನಾಥ ಹಾಗೂ ಮನೆ ಬಿಟ್ಟು ಬಂದ ಮಹಿಳೆಯರು ಹಾಗೂ ಬಾಲಕಿಯರನ್ನೇ ಟಾರ್ಗೆಟ್ ಮಾಡಿ, ನೌಕರಿ ಕೊಡಿಸುವ ಆಮಿಷವೊಡ್ಡಿ ಮನೆಗೆ ಕರೆತಂದು ಲಕ್ಕವ್ವ ಕೂಡಿ ಹಾಕುತ್ತಿದ್ದಳು ಎನ್ನಲಾಗಿದೆ. ಕೆಲ ದಿನಗಳ ಬಳಿಕ ಅಂತಹ ಬಾಲಕಿಯರು ಮತ್ತು ಯುವತಿಯರನ್ನು ಮಾರಾಟ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.
ಲಕ್ಕವ್ವನ ಕೈಯಿಂದ ಚಿಕ್ಕಮಗಳೂರು ಮೂಲದ ಯುವತಿ ತಪ್ಪಿಸಿಕೊಂಡು ಹೋದಾಗ ಈ ಕೃತ್ಯ ಬಯಲಾಗಿದೆ. ಆನಂತರ ಯುವತಿ ಲಕ್ಕವ್ವಳ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಆನಂತರ ಗ್ರಾಮಸ್ಥರು ಮನೆ ಹೊಕ್ಕು ನೋಡಿದಾಗ 14 ವರ್ಷದ ಬಾಲಕಿ ಮನೆಯಲ್ಲಿ ಪತ್ತೆಯಾಗಿದ್ದಾಳೆ.
ಸದ್ಯ ಸಂತ್ರಸ್ತ ಬಾಲಕಿಯನ್ನು ರಕ್ಷಿಸಿದ ಬ್ಯಾಗವಾದಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಮಕ್ಕಳ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಲಕ್ಕವ್ವಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.