ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಕ್ಯಾನ್‌ಬೆರಾದಲ್ಲಿ ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ರೋಹಿತ್ ಶರ್ಮಾ ಇರುವ ವಿಶೇಷ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈ ಪಂದ್ಯದಲ್ಲಿ ತಮ್ಮ ಹಳೆಯ ಖದರ್ ಪ್ರದರ್ಶಿಸಿದ ಸೂರ್ಯ, ಕೇವಲ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 39 ರನ್ ಗಳಿಸಿದರು.
150 ಸಿಕ್ಸರ್‌ಗಳ ಮೈಲಿಗಲ್ಲು
ಈ ಇನ್ನಿಂಗ್ಸ್‌ನಲ್ಲಿ ಎರಡನೇ ಸಿಕ್ಸರ್ ಬಾರಿಸುವುದರೊಂದಿಗೆ, ಸೂರ್ಯಕುಮಾರ್ ಯಾದವ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು. ಈ ಮೂಲಕ, ಅವರು ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯ ಮತ್ತು ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಮಾರ್ಟಿನ್ ಗಪ್ಟಿಲ್, ಜೋಸ್ ಬಟ್ಲರ್, ಮುಹಮ್ಮದ್ ವಸೀಮ್ ಮತ್ತು ರೋಹಿತ್ ಶರ್ಮಾ ಮಾತ್ರ ಈ ಸಾಧನೆ ಮಾಡಿದ್ದರು.
ಸೂರ್ಯಕುಮಾರ್ ತಮ್ಮ 86ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದು, ಇದು ಅವರ ಸ್ಫೋಟಕ ಆಟಕ್ಕೆ ಸಾಕ್ಷಿಯಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಅವರು ಇದುವರೆಗೆ 37.62ರ ಸರಾಸರಿಯಲ್ಲಿ 2709 ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕ ಮತ್ತು 21 ಅರ್ಧಶತಕಗಳು ಸೇರಿವೆ.
ಮಳೆಗೆ ಆಹುತಿಯಾದ ಪಂದ್ಯ
ಕಳಪೆ ಫಾರ್ಮ್‌ನಿಂದ ಟೀಕೆಗೆ ಗುರಿಯಾಗಿದ್ದ ಸೂರ್ಯಕುಮಾರ್, ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳುವ ಸೂಚನೆ ನೀಡಿದರು. ಶುಭಮನ್ ಗಿಲ್ ಜೊತೆಗೂಡಿ ಮುರಿಯದ ಎರಡನೇ ವಿಕೆಟ್‌ಗೆ 35 ಎಸೆತಗಳಲ್ಲಿ 62 ರನ್‌ಗಳ ಜೊತೆಯಾಟವಾಡಿದರು. ಆದರೆ, ಭಾರತ 9.4 ಓವರ್‌ಗಳಲ್ಲಿ 1 ವಿಕೆಟ್‌ಗೆ 97 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.
ಸರಣಿಯ ಎರಡನೇ ಟಿ20 ಪಂದ್ಯವು ಅಕ್ಟೋಬರ್ 31 ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (MCG) ನಡೆಯಲಿದೆ.
ಇದನ್ನೂ ಓದಿ : ಬೀದರ್ | RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ನೋಟಿಸ್!



















