ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಮಕ್ಕಳನ್ನು ಮತ್ತೆ ಶಾಲೆಯತ್ತ ಕರೆ ತರಲಾಗುತ್ತಿದೆ.
ಬಿಬಿಎಂಪಿಯ 8 ವಲಯಗಳ ಜಂಟಿ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಸಮೀಕ್ಷೆ ನಡೆಸಲಾಗುತ್ತಿದೆ. 1,08,203 ಮಕ್ಕಳ ಪೈಕಿ 6,936 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ತಿಳಿದು ಬಂದಿದೆ.
6 ರಿಂದ 14 ವರ್ಷದ ಪ್ರತಿ ಮಗುವಿಗೂ ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಕೆಲವು ತಿಂಗಳು ಬಾಕಿ ಉಳಿದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಚುರುಕುಗೊಳಿಸಲಾಗಿದೆ.
ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮದ ಅನುಸಾರ ಉಚಿತ ಶಿಕ್ಷಣ ಒದಗಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಕರ್ನಾಟಕ ಹೆಚ್2ಹೆಚ್ ಮಕ್ಕಳ ಸಮೀಕ್ಷೆ ಎಂಬ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಶ್ರಮಿಸಲಾಗುತ್ತಿದೆ.
ಯಾವ ವಲಯದಲ್ಲಿ ಎಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ?
ಬೊಮ್ಮನಹಳ್ಳಿ – 3355
ದಾಸರಹಳ್ಳಿ- 358
ಪೂರ್ವ- 526
ಮಹದೇವಪುರ- 568
ರಾಜರಾಜೇಶ್ವರಿ ನಗರ 511
ದಕ್ಷಿಣ- 1054
ಪಶ್ಚಿಮ-293
ಯಲಹಂಹ- 271
ಒಟ್ಟು- 6936