ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಅ. 4ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತದೆ ಎಂದು ತಿಳಿಸಿದ್ದು, ಅಂತೆಯೇ ಸರ್ಕಾರದ ಆದೇಶದ ಮೇರೆಗೆ ಸಮೀಕ್ಷೆ ಆರಂಭ ಮಾಡಿದ್ದೇವೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ ರಾವ್ ಮಾಹಿತಿ ನೀಡಿದ್ದಾರೆ.
ಇದರ ಅನ್ವಯ ಸಮೀಕ್ಷೆಯ ಬಗ್ಗೆ ಈ ಮೊದಲೇ ಗಣತಿದಾರರಿಗೆ ತರಬೇತಿ ನೀಡಲಾಗಿದೆ. ಹೆಲ್ಪ್ ಲೈನ್ ದಿನದ 24 ಗಂಟೆಯೂ ಕೆಲಸ ಮಾಡುತ್ತದೆ. ಸಮೀಕ್ಷೆಗೆ 17 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಮೊದಲ ದಿನ 11000 ಮಂದಿ ವರದಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಇಂದು ಮೊದಲ ದಿನ ಆಗಿರುವುದರಿಂದ ಆಪ್ ಕೆಲಸ ಮಾಡದೆ ಇರುವುದು, ಕೆಲ ಕಡೆಗಳಲ್ಲಿ ಒಟಿಪಿ ಬಾರದೇ ಇರುವ ತೊಂದರೆಗಳು ಉಂಟಾಗಿದ್ದು, ಈ ರೀತಿಯ ಸಣ್ಣಪುಟ್ಟ ಗೊಂದಲಗಳು ಕಂಡುಬಂದಿದೆ. ಸಂಜೆಯೊಳಗೆ ಈ ಎಲ್ಲಾ ಗೊಂದಲ ಬಗೆಹರಿಸುತ್ತೇವೆ ಎಂದು ಮಹೇಶ್ ರಾವ್ ತಿಳಿಸಿದ್ದಾರೆ.
ಗರ್ಭಿಣಿಯರು, 7 ದಿನದ ಬಾಣಂತಿಯರು, ಕ್ಯಾನ್ಸರ್ ಪೇಷೆಂಟ್ ಮತ್ತು ವಿಕಲ ಚೇತನರಿಗೆ ಸಮೀಕ್ಷೆಗೆ ನೇಮಿಸುವ ವಿಚಾರ ಸಂಬಂಧಿಸಿದಂತೆ ಗಮನಹರಿಸಿದ್ದು, ಅವರಿಗೆ ಅಗತ್ಯವಿದ್ದರೆ ವಿನಾಯಿತಿ ನೀಡಲಾಗುವುದು. 900 ಮೆಡಿಕಲ್ ಪ್ರಕರಣಗಳು ಬಂದಿದ್ದು, ಅದನ್ನು ಪರಿಶೀಲಿಸಲಾಗುವುದು. ಆರೋಗ್ಯ, ಫೈನಾನ್ಸ್ ಕಚೇರಿ ಸೇರಿದಂತೆ ಅಗತ್ಯ ಇಲಾಖೆ ಸಿಬ್ಬಂದಿಗೆ ಸಮೀಕ್ಷೆಯಿಂದ ವಿನಾಯಿತಿ ಇದೆ ಎಂದು ಮಾಹಿತಿ ನೀಡಿದ್ದಾರೆ.



















