ಬೆಂಗಳೂರು : ರಾಜ್ಯ ಕಾಂಗ್ರೆಸ್‌ನ ಆಂತರಿಕ ವೈಷಮ್ಯವನ್ನು ಬಗೆಹರಿಸುವ ಉದ್ದೇಶದಿಂದ ಇತ್ತೀಚಿಗಷ್ಟೇ ಬೆಂಗಳೂರಿಗೆ ಬಂದು ಕಾಂಗ್ರೆಸ್ ಶಾಸಕರ ಮತ್ತು ಸಚಿವರ ಜೊತೆ ಒನ್ ಟು ಒನ್ ಸಭೆ ನಡೆಸಿದ್ದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಲವು ಮಂದಿ ಸರ್ಕಾರಿ ಅಧಿಕಾರಿಗಳಿಗೂ ಕೂಡ ಬುಲಾವ್ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಸಂಬಂಧಿಸಿದಂತೆ ಸಹಕಾರ ಸಚಿವ ಕೆಎನ್ ರಾಜಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುರ್ಜೇವಾಲ ಸರ್ಕಾರಿ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿದ್ದೇ ಆದರೆ ಅದು ಸಂವಿಧಾನ ಬಾಹೀರ ಕೃತ್ಯ ಎಂದು ರಾಜಣ್ಣ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಎರಡು ವಾರ ರಾಜ್ಯದಲ್ಲಿ ಠಿಕಾಣಿ ಹೂಡಿದ್ದ ಸುರ್ಜೇವಾಲ, ಶಾಸಕರ ಸಭೆ ನಡೆಸಿ ಚರ್ಚೆಗೆ ನಾಂದಿ ಹಾಡಿದ್ದರು. ಇದರ ಮಧ್ಯೆ, ಕೆಲವು ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಸುರ್ಜೆವಾಲಾ ಬುಲಾವ್ ಹೊರಡಿಸಿದ್ದರು ಎಂಬ ಆರೋಪವಿದೆ. ಖಾಸಗಿ ಹೊಟೇಲ್ನಲ್ಲಿ ಕೆಲ ಪ್ರಮುಖ ಹಿರಿಯ ಅಧಿಕಾರಿಗಳ ಜೊತೆ ಸುರ್ಜೇವಾಲಾ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಕೆ.ಎನ್. ರಾಜಣ್ಣ ಹೇಳಿದ್ದೇನು ?
ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಶಾಸಕರನ್ನು ಕರೆದು ಸುರ್ಜೇವಾಲಾ ಮೀಟಿಂಗ್ ಮಾಡಬಹುದು. ಆದರೆ, ಸರ್ಕಾರಿ ಅಧಿಕಾರಿಗಳನ್ನು ಕರೆದು ಮಾತನಾಡುತ್ತಾರೆ ಎಂದರೆ ಅದು ಸಂವಿಧಾನಬಾಹೀರ ಕೃತ್ಯವಾಗುತ್ತದೆ. ಅಧಿಕಾರಿಗಳನ್ನು ಕರೆದು ಅವರ ಜೊತೆಗೆ ಚರ್ಚೆ ಮಾಡುವುದು ಸಂವಿಧಾನ ವಿರೋಧಿ ಕೆಲಸವೆಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಹಿಂದೊಮ್ಮೆ ಅದೇ ರೀತಿ ಸಭೆ ಮಾಡಿದ್ದರು. ಆದರೆ, ಆಗ ಅಲ್ಲಿ ಸುರ್ಜೇವಾಲಾ ಆಹ್ವಾನ ನೀಡಿದ್ದಾಗಿರಲಿಲ್ಲ. ಶಾಂಗ್ರಿಲಾ ಹೊಟೇಲ್ನಲ್ಲಿಯೇ ಸುರ್ಜೆವಾಲಾ ವಾಸ್ತವ್ಯ ಇದ್ದರು. ಡಿಸಿಎಂ ಬೆಂಗಳೂರು ಅಧಿಕಾರಿಗಳ ಸಭೆ ನಡೆಸುವಾಗ ಸುರ್ಜೆವಾಲಾ ಬಂದಿದ್ದರು. ಆದರೆ, ಈಗ ಅಧಿಕಾರಿಗಳನ್ನು ತಾವೇ ಸ್ವತಃ ಕರೆದಿದ್ದಾರೆ ಎಂದರೆ ಅದು ಸಂವಿಧಾನದ ಬಾಹೀರ. ನಮ್ಮ ಶಾಸಕರನ್ನು, ಸಚಿವರನ್ನು ಕರೆದು ಬೇಕಾದರೆ ಏನಾದರೂ ಮಾಹಿತಿ ಪಡೆದುಕೊಳ್ಳಬಹುದು. ಆದರೆ, ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯಲು ಕಾನೂನುಬದ್ಧ ಅವಕಾಶವಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.



















